ಕೂಡಿಗೆ, ಅ. 13: ಓಡಿಪಿ ಸಂಸ್ಥೆ, ಮೈಸೂರು ವತಿಯಿಂದ ರೈತ ಉತ್ಪನ್ನ ಕೂಟದಲ್ಲಿ ನೋಂದಾಯಿತ ರೈತರಿಗೆ ಉಚಿತವಾಗಿ ಗೊಬ್ಬರ ಮತ್ತು ತೆಂಗಿನ ಗಿಡಗಳ ವಿತರಣಾ ಕಾರ್ಯಕ್ರಮ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಓಡಿಪಿ ಸಂಸ್ಥೆಯ ನಿರ್ದೇಶಕ ಸ್ವಾಮಿ ಅಲೆಕ್ಸ್ ಪ್ರಶಾಂತ ಸಿಕ್ವೇರಾ ನೆರವೇರಿಸಿದರು. ಸಂಸ್ಥೆಯು ಕೊಡಗು ಸೇರಿದಂತೆ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಯಲ್ಲಿ 30 ರೈತೋತ್ಪನ್ನ ಕೂಟಗಳನ್ನು ರಚನೆ ಮಾಡಿ ಅವುಗಳ ಮೂಲಕ 6000 ರೈತರಿಗೆ ಉಚಿತವಾಗಿ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಔಷಧಗಳನ್ನು ಹಾಗೂ ಕೆಲವೆಡೆ ತೆಂಗಿನ ಗಿಡಗಳನ್ನು ವಿತರಣೆ ಮಾಡಲಾಗಿದೆ. ಅಲ್ಲದೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆಯನ್ನು ಕೊಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಭೂಮಿಕ ರೈತ ಕೂಟದ ಅಧ್ಯಕ್ಷ ಹೊನ್ನಣ್ಣ, ಸಂಯೋಜಕರಾದ ರಮೇಶ್, ಜಾನ್, ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೆಜಸ್ ಹಾಜರಿದ್ದರು. 48 ರೈತರಿಗೆ ಉಚಿತವಾಗಿ ರಸಗೊಬ್ಬರ ಮತ್ತು ತೆಂಗಿನ ಗಿಡಗಳನ್ನು ವಿತರಣೆ ಮಾಡಲಾಯಿತು. ಸುಂದರ ದಾಸ್ ಸ್ವಾಗತಿಸಿದರೆ, ಮಮತ ವಂದಿಸಿದರು.