ಮಡಿಕೇರಿ, ಅ. 13: ವಿಶ್ವಮಟ್ಟದಲ್ಲಿಯೆ ಕೋವಿಡ್ ತಂದೊಡ್ಡಿರುವ ಸಂಕಷ್ಟ ಅಷ್ಟಿಷ್ಟಲ್ಲ. ಕೊಡಗು ಜಿಲ್ಲೆಯೂ ಇದರಿಂದ ಹೊರತಾಗಿಲ್ಲ. ಪ್ರಸಕ್ತ ವರ್ಷ ಒಂದೆಡೆ ಪ್ರಾಕೃತಿಕ ವಿಕೋಪ, ಮತ್ತೊಂದೆಡೆ ಕೊರೊನಾ ಸಂಕಟದ ನಡುವೆ ಜಿಲ್ಲೆಯ ಅತ್ಯಂತ ಪವಿತ್ರ ಕ್ಷೇತ್ರವಾದ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ತಾ. 17 ರಂದು ಬೆಳಗ್ಗಿನ ವೇಳೆ (7 ಗಂಟೆ 3 ನಿಮಿಷ) ಪುಣ್ಯ ತೀರ್ಥೋದ್ಭವ ಜರುಗುತ್ತಿದೆ. ಇನ್ನೊಂದೆಡೆ ಅದೇ ದಿನ ಸಂಜೆ ವೇಳೆ ಮಡಿಕೇರಿಯ ಐತಿಹಾಸಿಕ ಕರಗ ಉತ್ಸವ ಪ್ರಾರಂಭಗೊಳ್ಳುತ್ತಿದೆ. ಅಲ್ಲದೆ ತಾ. 26 ರಂದು ಮಡಿಕೇರಿ ಮತ್ತು ಗೋಣಿಕೊಪ್ಪಲುಗಳಲ್ಲಿ ದಸರಾ ಉತ್ಸವ ನಡೆಯಲಿದೆ.ಆದರೆ, ಈ ವರ್ಷ ಎಲ್ಲಾ ಆಚರಣೆಗಳೂ ಕಳೆಗುಂದಲ್ಪಟ್ಟು ಕೇವಲ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತವಾಗಿ ಏರ್ಪಟ್ಟಿದೆ. ತೀರ್ಥೋದ್ಭವ ಸನ್ನಿವೇಶವನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದ ಅವಕಾಶ ಕೈ ತಪ್ಪಿ ಹೋಗಿದ್ದು, ಕೇವಲ ಸಮಿತಿಯ ಕೆಲವು ಪ್ರಮುಖರು ಹಾಗೂ ದೇವಾಲಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಸೇರಿದಂತೆ ಸುಮಾರು 50 ಮಂದಿ ಮಾತ್ರ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆ ಪೈಕಿಯೂ ಭಾಗವಹಿಸುವ ಎಲ್ಲರೂ ಕೂಡ 48 ಗಂಟೆ ಅವಧಿಗೆ ಮುನ್ನ ಆರ್ಟಿಪಿಸಿಆರ್ ವಿಧಾನದಲ್ಲಿ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ‘ನೆಗೆಟಿವ್’ ದೃಢೀಕರಣ ಪತ್ರವನ್ನು ಪಡೆಯಬೇಕಿದೆ. ಅಂತವರಿಗೆ ಮಾತ್ರ ತೀರ್ಥೋದ್ಭವ ವೀಕ್ಷಿಸಲು ಅನುಮತಿ ನೀಡಲಾಗುತ್ತದೆ.
ತೀರ್ಥೋದ್ಭವ ಘಟಿಸಿದ ಬಳಿಕ ಹೊರ ಭಾಗದಲ್ಲಿ ನಿಂತಿರುವ ಭಕ್ತಾದಿಗಳನ್ನು ಥರ್ಮಲ್ ಪರೀಕ್ಷೆ ಮೂಲಕ ಒಳಗೆ ಬಿಡಲಾಗುತ್ತದೆ. ಅಲ್ಲಿ ಅವರು ತೀರ್ಥ ಪ್ರೋಕ್ಷಣೆ ಮೂಲಕವಷ್ಟೆ ಸಂತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಈ ವಿಷಯವನ್ನು ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಇವರುಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಅದೇ ರೀತಿ ಮಡಿಕೇರಿಯ ಐತಿಹಾಸಿಕ ಕರಗ-ದಸರಾ ಉತ್ಸವ ಹಾಗೂ ಗೋಣಿಕೊಪ್ಪಲು ದಸರಾ ಉತ್ಸವಗಳಿಗೂ ನಿರ್ಬಂಧ ಹೇರಲಾಗಿದೆ. ಕರಗ ಉತ್ಸವದಲ್ಲಿ ಆಯಾ ದೇವಾಲಯ ಸಮಿತಿಗಳ ನಿಯಮಿತ ಸದಸ್ಯರುಗಳು ಮಾತ್ರ ಪಾಲ್ಗೊಳ್ಳಬಹುದು. ಅವರುಗಳು ಕೂಡ 48 ಗಂಟೆಗೆ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ದೃಢೀಕರಣ ಪತ್ರವನ್ನು ಪಡೆಯಬೇಕಿದೆ. ಅಲ್ಲದೆ ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ಕರಗ ಉತ್ಸವ ವೀಕ್ಷಣೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ತಾ. 26 ರಂದು ದಸರಾ ದಿನವೂ ಕೂಡ ಮಡಿಕೇರಿ ಮತ್ತು ಗೋಣಿಕೊಪ್ಪಲುಗಳಲ್ಲಿ ಕೇವಲ ಆಯಾ ದೇವಾಲಯ ದಸರಾ ಸಮಿತಿಗೆ ಸಂಬಂಧಪಟ್ಟವರು ನಿಯಮಿತ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ. ಅವರಿಗೂ ಕೂಡ 48 ಗಂಟೆಗಳ ಮುನ್ನ ಕೋವಿಡ್ ಪರೀಕ್ಷೆಯನ್ನು ಕಡ್ಡಾಯ ಮಾಡಲಾಗಿದೆ.
ಪ್ರವಾಸಿ ತಾಣ ಬಂದ್
ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಾಗಿ ಬರುವ ಹಿನ್ನೆಲೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ತಾ. 17 ಮತ್ತು ತಾ. 26 ರಂದು ಮಡಿಕೇರಿ ನಗರ ಹಾಗೂ ಸುತ್ತಮುತ್ತ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು.
ತಾತ್ಕಾಲಿಕ ಅಂಗಡಿಗಳಿಗೆ ಅನುಮತಿ ಇಲ್ಲ
ದಸರಾ ಹಾಗೂ ಕಾವೇರಿ ತೀರ್ಥೋದ್ಭವ ವೇಳೆ ಮಡಿಕೇರಿ ಹಾಗೂ ಭಾಗಮಂಡಲ ವ್ಯಾಪ್ತಿಯಲ್ಲಿ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ಈಗಾಗಲೇ ಇರುವಂತಹ ಅಂಗಡಿಗಳು ಮಾತ್ರ ಕಾರ್ಯನಿರ್ವಹಿಸಬಹುದಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್
ಹೇಳಿದರು.
(ಮೊದಲ ಪುಟದಿಂದ)
ಎರಡು ಹಂತದ ಪರೀಕ್ಷೆ
ಕರಗದಲ್ಲಿ ಪಾಲ್ಗೊಳ್ಳುವ ಸಮಿತಿ ಕಾರ್ಯಕರ್ತರಿಗೆ ಹಾಗೂ ಕಾವೇರಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ 48 ಗಂಟೆ ಮುಂಚಿತವಾಗಿ ಅಂದರೆ ತಾ. 14 ಮತ್ತು 15 ರಂದು ಆರ್ಟಿಪಿಸಿಆರ್
ಪರೀಕ್ಷೆ ನಡೆಯಲಿದ್ದು, ಸಮಿತಿ ಪ್ರಮುಖರು ಕಾರ್ಯಕರ್ತರ ಪಟ್ಟಿ ಮಾಡಿ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸಲ್ಲಿಸಬೇಕಿದೆ. ದಸರಾ ಸಂಬಂಧ ತಾ. 23 ಮತ್ತು 24 ರಂದು ಕೂಡ ವಿಜಯ ದಶಮಿಯಂದು ಪಾಲ್ಗೊಳ್ಳುವ ಕಾರ್ಯಕರ್ತರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಈ ಎರಡೂ ಉತ್ಸವಗಳಲ್ಲೂ ಕೂಡ ಪರೀಕ್ಷಾ ವರದಿ ಇದ್ದರೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಪಿಂಡ ಪ್ರದಾನಕ್ಕೆ ಅವಕಾಶ
ಕೊರೊನಾ ನಿಯಮ ಪಾಲನೆಯೊಂದಿಗೆ ಭಾಗಮಂಡಲ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ತಲಕಾವೇರಿಯಲ್ಲಿ ತೀರ್ಥ ಸ್ನಾನಕ್ಕೆ ಅವಕಾಶವಿಲ್ಲ. ಅನ್ನದಾನ ಮಾಡುವಂತಿಲ್ಲ. ವಿಶೇಷ ಬಸ್ ವ್ಯವಸ್ಥೆ ಒದಗಿಸುವುದಿಲ್ಲ, ದೇವಾಲಯದಲ್ಲಿ ಉಳಿಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.
ಹೋಂಸ್ಟೇ-ರೆಸಾರ್ಟ್ ಪರಿಶೀಲನೆ
ದಸರಾ ಹಿನ್ನೆಲೆಯಲ್ಲಿ ಹೋಂಸ್ಟೇ, ರೆಸಾರ್ಟ್, ಲಾಡ್ಜ್ಗಳಿಗೆ ಅಧಿಕಾರಿಗಳ ತಂಡ ಸದ್ಯದಲ್ಲೇ ಭೇಟಿ ನೀಡಲಿದೆ. ಈ ವೇಳೆ ಕೊರೊನಾ ಹಿನ್ನೆಲೆ ಸರಕಾರದ ನಿಯಮಗಳನ್ನು ಪಾಲಿಸಲಾಗುತ್ತಿದೆಯೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತದೆ. ಒಂದುವೇಳೆ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿಸಿದ ಮಾಲೀಕರ ವಿರುದ್ಧ ವಿಕೋಪ ನಿರ್ವಹಣೆ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಎಚ್ಚರಿಕೆಯಿತ್ತರು.
ಏಕಪಕ್ಷೀಯ ತೀರ್ಮಾನವಲ್ಲ
ಕೊರೊನಾ ಹಿನ್ನೆಲೆಯಲ್ಲಿ ದಸರಾ ಹಾಗೂ ಕಾವೇರಿ ತೀರ್ಥೋದ್ಭವವನ್ನು ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಆಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದ್ದು, ಜಿಲ್ಲಾಡಳಿತವು ದಸರಾ ಸಮಿತಿಗಳು ಹಾಗೂ ಕಾವೇರಿ ದೇವಾಲಯ ಸಮಿತಿ ಮತ್ತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕೈಗೊಂಡಿರುವ ಕ್ರಮಗಳಾಗಿವೆಯೇ ಹೊರತು ಇದು ಜಿಲ್ಲಾಡಳಿತದ ಏಕಪಕ್ಷೀಯ ತೀರ್ಮಾನವಲ್ಲ ಎಂದು ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದರು.
ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳ ನಡುವೆಯೂ ಪರಿಸ್ಥಿತಿ ಕೈಮೀರುವ ಹಂತ ತಲುಪಿದರೆ ನಿಷೇಧಾಜ್ಞೆ ಜಾರಿ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಲೈಟ್ ಸೌಂಡ್ ಇಲ್ಲ
ದಸರಾ ಕಲಶ ಮೆರವಣಿಗೆ ವೇಳೆ ಧ್ವನಿವರ್ಧಕ, ಕಣ್ಕುಕ್ಕುವ ಲೈಟ್ಗಳ ಬಳಕೆಗೆ ಅವಕಾಶವಿಲ್ಲ. ಮಡಿಕೇರಿ ನಗರ ವ್ಯಾಪ್ತಿಯ ಬೀದಿ ದೀಪಗಳನ್ನು ದುರಸ್ತಿಗೊಳಿಸಿ ಬೆಳಕಿನ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲು ನಗರಸಭಾ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.