ಮಡಿಕೇರಿ, ಅ. 13: ಕೆದಕಲ್-ಭೂತನಕಾಡು ರಸ್ತೆಯು ಸುಮಾರು 6 ಕಿ.ಮೀ. ಉದ್ದವಿದ್ದು, ಅದು ಮೋದೂರು, ಹೊರೂರು, ಕೆದಕಲ್, ಅತ್ತೂರು-ನಲ್ಲೂರು, ಅಭ್ಯತ್‍ಮಂಗಲ, ಈರವಳಮುಡಿ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಆದರೆ ಈ ರಸ್ತೆಯು ಅನೇಕ ವರ್ಷಗಳಿಂದ ಯಾವುದೇ ನಿರ್ವಹಣೆ ಇಲ್ಲದೆ ಅತ್ಯಂತ ಹೀನ ಸ್ಥಿತಿಯಲ್ಲಿದೆ. ಈ ಗ್ರಾಮಗಳು ಕಾಫಿ ತೋಟಗಳಿಂದ ಕೂಡಿದ್ದು, ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಈ ರಸ್ತೆಯನ್ನು ಉಪಯೋಗಿಸುತ್ತಾರೆ.

ಈ ರಸ್ತೆಯು ಮಡಿಕೇರಿಯಿಂದ ಚೆಟ್ಟಳ್ಳಿ ಮತ್ತು ಸಿದ್ದಾಪುರಕ್ಕೆ ಪರ್ಯಾಯ ರಸ್ತೆಯಾಗಿದೆ. ಕೆದಕಲ್ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, 1 ಕಿ.ಮೀ. ರಸ್ತೆಗೆ ಕಾಂಕ್ರಿಟ್ ಹಾಕಿ ಅಭಿವೃದ್ಧಿಪಡಿಸಿದ್ದನ್ನು ಹೊರತುಪಡಿಸಿ ಬಾಕಿ ರಸ್ತೆ ಹಾಗೆ ದುಸ್ಥಿತಿಯಲ್ಲಿದೆ. ಈ ರಸ್ತೆಯ ಹೀನಾಯ ಸ್ಥಿತಿಯ ಬಗ್ಗೆ ಪಂಚಾಯಿತಿಗೆ ಅನೇಕ ಬಾರಿ ಅಹವಾಲು ಸಲ್ಲಿಸಿದ್ದರೂ ಏನೂ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರಾದ ಕೆ.ಎ. ಪ್ರಭಾಕರ್ ಹೇಳುತ್ತಾರೆ.

ಇದೀಗ ಸದರಿ ರಸ್ತೆಯನ್ನು ಪಿ.ಡಬ್ಲ್ಯೂ.ಡಿ.ಗೆ ಹಸ್ತಾಂತರಿಸಿರುವುದಾಗಿ ತಿಳಿದುಬಂದಿದೆ. ಈಗಲಾದರೂ ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆಯವರು ಸದರಿ ರಸ್ತೆಯನ್ನು ಪರಿಶೀಲಿಸಿ ಅಭಿವೃದ್ಧಿಗೊಳಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.