ಮಡಿಕೇರಿ, ಅ. 13: ಕೊಡಗಿನ ಮಳೆಗಾಲಕ್ಕೆ ಪದೇ ಪದೇ ಅರಬ್ಬಿಸಮುದ್ರ, ಬಂಗಾಳಕೊಲ್ಲಿಯಲ್ಲಿ ಆಗಾಗ್ಗೆ ಉಂಟಾಗುತ್ತಿರುವ ವಾಯುಭಾರ ಕುಸಿತವು ತಳಕು ಹಾಕಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳಿನಿಂದ ಮಳೆಗಾಲದ ಚಿತ್ರಣವೇ ಎದುರಾಗುತ್ತಿದೆ.ಕಳೆದ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಮುಂಗಾರು ಬಿರುಸು ತೋರಿದ್ದು, ಕೆಲವಾರು ಅನಾಹುತಗಳನ್ನು ಸೃಷ್ಟಿಸಿತ್ತು. ಇದರೊಂದಿಗೆ ಈ ಹಿಂದೆ ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ, ಇದೀಗ ಒಂದೆರಡು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ಮತ್ತೆ ಉಂಟಾಗಿರುವ ವಾತಾವರಣ ವೈಪರೀತ್ಯದ ಪರಿಣಾಮ ಜಿಲ್ಲೆ ಮತ್ತೆ ಮಳೆಗಾಲದ ಚಿತ್ರಣವನ್ನು ಕಾಣುವಂತಾಗಿದೆ.ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಭಾರೀ ಮಳೆಯಾಗುತ್ತಿದೆ. ಇದರೊಂದಿಗೆ ಕೆಲವೆಡೆಗಳಲ್ಲಿ ಗಾಳಿಯೂ ಅಧಿಕವಾಗಿದ್ದು, ಚಳಿಯೂ ಹೆಚ್ಚಾಗಿದೆ. ಪ್ರಸ್ತುತ ಅಕ್ಟೋಬರ್ ತಿಂಗಳ ಅರ್ಧಭಾಗ ಪೂರ್ಣಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಈಗಲೂ ನಿರಂತರ ಮಳೆ ಎದುರಾಗುತ್ತಿರುವುದು ಹಲವು ಕೆಲಸ ಕಾರ್ಯಗಳಿಗೆ ಅಡಚಣೆಯಾಗಿದೆ.
ತಲಕಾವೇರಿ ತೀರ್ಥೋದ್ಭವದ ಸಮಯವೂ ಎದುರಾಗುತ್ತಿದೆ. ಅಲ್ಲಲ್ಲಿ ರಸ್ತೆ-ಸೇತುವೆಯಂತಹ ಕಾಮಗಾರಿಗಳನ್ನು ನಡೆಸಲು ಸಿದ್ಧತೆ ನಡೆದಿದ್ದು, ಇವೆಲ್ಲವಕ್ಕೂ ಅಕಾಲಿಕ ಮಳೆ ಸಮಸ್ಯೆಯಾಗುತ್ತಿದೆ. ಇದರೊಂದಿಗೆ ಜನತೆಯ ಬವಣೆಯೂ ಮುಂದುವರಿಯುವಂತಾಗಿದೆ.
ಜಿಲ್ಲೆಯಲ್ಲಿ ಈತನಕ ಸರಾಸರಿ 95.99 ಇಂಚಿನಷ್ಟು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 90 ಸೆಂಟ್‍ನಷ್ಟು ಮಳೆ ಬಿದ್ದಿದೆ. ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ 1.04, ವೀರಾಜಪೇಟೆ ತಾಲೂಕಿನಲ್ಲಿ 0.94 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 0.73 ಇಂಚಿನಷ್ಟು ಸರಾಸರಿ ಮಳೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಈತನಕ 136 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 86 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 65 ಇಂಚು ಮಳೆ ದಾಖಲಾಗಿದೆ.
ಹುದಿಕೇರಿ ಹೋಬಳಿಗೆ ಅಧಿಕ ಮಳೆ
ಕಳೆದ 24 ಗಂಟೆಗಳಲ್ಲಿ ವೀರಾಜಪೇಟೆ ತಾಲೂಕಿನ ಹುದಿಕೇರಿ ಹೋಬಳಿಗೆ 1.92 ಇಂಚು ಮಳೆಯಾಗಿದ್ದರೆ, ಭಾಗಮಂಡಲಕ್ಕೆ 1.86, ಶಾಂತಳ್ಳಿ 1.56, ಮಡಿಕೇರಿ ಕಸಬಾ 1.30, ನಾಪೋಕ್ಲು ಹಾಗೂ ಶನಿವಾರಸಂತೆ ಹೋಬಳಿಯಲ್ಲಿ ತಲಾ 1 ಇಂಚು ಮಳೆ ದಾಖಲಾಗಿದೆ.