ಮಡಿಕೇರಿ, ಅ. 13: ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಗುರುತಿಸಿರುವ ಜಾಗದಲ್ಲಿರುವ ಮರಗಳನ್ನು ಕಡಿಯಲು ಒತ್ತಾಯಿಸಿ ನೆಲ್ಲಿಹುದಿಕೇರಿಯ ಸಂತ್ರಸ್ತರ ಹೋರಾಟ ಸಮಿತಿಯ ವತಿಯಿಂದ ಮಡಿಕೇರಿ ವಿಭಾಗದ ಉಪಸಂರಕ್ಷಣಾಧಿಕಾರಿ ಕಚೇರಿ ಎದುರು ತಾ. 12 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ನದಿ ದಡದಲ್ಲಿ ವಾಸಿಸುತ್ತಿರುವ ಅತ್ಯಂತ ಕಡು ಬಡ ಕುಟುಂಬಗಳು ಸುಮಾರು 23 ವರ್ಷಗಳಿಂದ ಕಾವೇರಿ ನದಿ ಪ್ರವಾಹದ ಸಂದರ್ಭದಲ್ಲಿ ಮನೆಗಳಿಗೆ ನೀರು ನುಗ್ಗಿ ವಾಸಿಸಲು ಸಾಧ್ಯವಾಗದ ಹಲವಾರು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. 2018-19ರ ಮಹಾ ಮಳೆಯಲ್ಲಿ ಪ್ರವಾಹ ಹೆಚ್ಚಾಗಿ ತಮ್ಮ ವಾಸದ ಮನೆಗಳು ಕಾವೇರಿ ನೀರು ಪಾಲಾಗಿದ್ದು ವಾಸಿಸಲು ಮನೆ ಇಲ್ಲದೆ ಸಂತ್ರಸ್ತರ ಕೇಂದ್ರದಲ್ಲಿ ಬದುಕು ನಡೆಸುವಂತಾಯಿತು. ಸ್ವಂತ ಶಾಶ್ವತ ಸೂರಿಗಾಗಿ ಸಮೀಪದ ಅಭ್ಯತ್‍ಮಂಗಲ ವ್ಯಾಪ್ತಿಯ ಸರ್ವೆ ನಂ. 87/2 ರಲ್ಲಿರುವ ಸರಕಾರಿ ಒತ್ತುವರಿ ಜಾಗವನ್ನು ಬಿಡಿಸಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ ಜಾಗದಲ್ಲಿ ಮರಗಳು ಇದ್ದು ಮರಗಳನ್ನು ಕತ್ತರಿಸಿ ನಿವೇಶನವನ್ನಾಗಿ ಪರಿವರ್ತನೆ ಮಾಡಿ ಮನೆ ನಿರ್ಮಿಸಲು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರಿಗೆ ಪತ್ರ ಬರೆದರೂ ಈವರೆಗೂ ಮರ ಕಡೆಯುವ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ. ಕೂಡಲೇ ಸಂತ್ರಸ್ತರಿಗೆ ಗುರುತು ಮಾಡಿರುವ ನಿವೇಶನದಲ್ಲಿರುವ ಮರಗಳನ್ನು ಕಡಿದು ಮನೆ ನಿರ್ಮಿಸಲು ಅವಕಾಶ ಕಲ್ಪಿಸಿಕೊಡಬೇಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್. ಭರತ್, ಕಾರ್ಯದರ್ಶಿ ಮಣಿ ಮಹಮ್ಮದ್ ಹಾಗೂ ಸದಸ್ಯರು ಆಗ್ರಹಿಸಿದರು.