ಕಣಿವೆ, ಅ. 13 : ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ನಗರ ಕುಶಾಲನಗರದ ನೇತಾಜಿ ಬಡಾವಣೆಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಸಾರ್ವಜನಿಕರ ಲಕ್ಷಾಂತರ ರೂಗಳನ್ನು ವ್ಯಯ ಮಾಡಿ ನಿರ್ಮಿಸಿರುವ ಉದ್ಯಾನವನ ಉರಗಗಳು, ಓತಿಕ್ಯಾತಗಳು ಹಾಗು ಇಲಿ - ಹೆಗ್ಗಣಗಳ ಆವಾಸಸ್ಥಾನ ವಾಗಿ ಮಾರ್ಪಟ್ಟಿದೆ. ಹೀಗಿದ್ದರೂ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಈ ಉದ್ಯಾನದ ಉಸಾಬರಿಯತ್ತ ಗಮನ ಹರಿಸಿಲ್ಲ. ಇನ್ನು ಈ ಉದ್ಯಾನವನ ಇದರ ಸುತ್ತಲೂ ಇರುವ ನಾಗರಿಕರಿಗೂ ಬೇಡವಾಗಿ, ಮನೆಯಲ್ಲಿ ಉತ್ಪತ್ತಿಯಾಗುವ ಕಸ - ತ್ಯಾಜ್ಯಗಳನ್ನು ಮನೆಯೊಳಗಿಂದ ಹೊರ ತಂದು ಬೇಲಿಯೊಳಗೆ ಎಸೆಯಲು ಬಳಕೆಯಾಗುತ್ತಿದೆ. ಈ ಉದ್ಯಾನವನವನ್ನು ನಿರ್ಮಿಸುವ ಪೂರ್ವದಲ್ಲಿ ಈ ಜಾಗದಲ್ಲಿ ಹುಲುಸಾಗಿ ಬೆಳೆದು ನಿಂತಿದ್ದ ಕೆಲವು ಜಾತಿಯ ಮರಗಳು ಇಲ್ಲಿನ ಮಂದಿಗೆ ಸ್ವಚ್ಛಂದವಾದ ಆಮ್ಲಜನಕವನ್ನು ಪೂರೈಸುತ್ತಿದ್ದವು. ಆದರೆ ದೂರದೃಷ್ಟಿ ಇಲ್ಲದ ಅಂದಿನ ಆಡಳಿತಾರೂಢರು ಉದ್ಯಾನವನದ ಹೆಸರಲ್ಲಿ ಹಣ ಮಾಡುವ ದುರಾಲೋಚನೆಯಿಂದ ಬೆಳೆದು ನಿಂತಿದ್ದ ಮರಗಳನ್ನು ಕಡಿದುರುಳಿಸಿ ಸುತ್ತಲೂ ಒಂದಷ್ಟು ಬೇಕಾ ಬಿಟ್ಟಿಯಾದ ಗಿಡಗಳನ್ನು ನೆಟ್ಟು ಸುತ್ತಲೂ ಬೇಲಿ ನಿರ್ಮಿಸಿ ಉದ್ಯಾನವನ ಅಂತ ಹೆಸರಿಟ್ಟರು. ಅಂದಿನಿಂದ ಈವರೆಗೂ ಈ ಉದ್ಯಾನವನಕ್ಕೆ ಪಂಚಾಯಿತಿಯ ಅಕ್ಕರೆಯಾಗಲಿ, ಸುತ್ತಲಿನ ನಿವಾಸಿಗಳ ಆರೈಕೆಯಾಗಲಿ ಸಿಗದಾಯಿತು. ಆರಂಭದಲ್ಲಿ ನೆಟ್ಟ ಗಿಡಗಳು ನೀರಿಲ್ಲದೆ ಒಣಗಿದವು. ಮಳೆಯಿಂದಾಗಿ ಮೊಳಕೆಯೊಡೆದು ಸ್ವಾಭಾವಿಕವಾಗಿ ಬೆಳೆಯುವ ಒಂದಷ್ಟು ಕಾಡು ಗಿಡಗಳು ಇಲ್ಲಿ ಬೆಳೆದವು. ಹಾಗಾಗಿ ಇದು ಉದ್ಯಾನವನ ಹೋಗಿ ನೇತಾಜಿ ಬಡಾವಣೆಯ ಊರಿನ ವನವಾಗಿದೆ. ಸಹಜವಾಗಿಯೇ ವನದೊಳಗೆ ಇರಬಹುದಾದ ಹಾವು, ಹಲ್ಲಿ, ಓತಿಕ್ಯಾತಗಳು, ಇಲಿ - ಹೆಗ್ಗಣಗಳು ಇಲ್ಲಿ ಆಶ್ರಯ ಪಡೆದಿವೆ. ಆದರೂ ಕೂಡ ಇದರೊಳಗೆ ಬಡ ಕುಟುಂಬಗಳಿಗೆ ಸೇರಿದ ಪಕ್ಕದ ಬಡಾವಣೆಯೊಂದರ ಕೆಲವು ಮಕ್ಕಳು ಆಟವಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಇದರ ಸನಿಹವೇ ಸುತ್ತಲೂ ಇರುವ ಹಲವು ಸ್ಥಿತಿವಂತರ ಮಕ್ಕಳಿಗೆ ಇದು ಅವರವರ ಪೆÇೀಷಕರಿಂದ ನಿಷೇಧಿತ ಪ್ರದೇಶ!

(ಮೊದಲ ಪುಟದಿಂದ) ಏಕೆಂದರೆ, ‘ಅಲ್ಲಿ ಹೋಗಬೇಡಿ ಮಕ್ಕಳೇ ಹಾವು, ಹಲ್ಲಿಗಳಿವೆ’ ಎಂದು ಎಚ್ಚರಿಸಿ ತಮ್ಮ ಮಕ್ಕಳನ್ನು ಇದರೊಳಗೆ ತೆರಳದಂತೆ ಪಾಲಕರು ನೋಡಿಕೊಂಡಿದ್ದಾರೆ.

ಇಲ್ಲಿ ಎಲ್ಲದಕ್ಕೂ ಪಂಚಾಯಿತಿ ಆಡಳಿತ ಹಾಗು ಅಧಿಕಾರಿಗಳನ್ನು ದೂರಿ ಫಲವಿಲ್ಲ. ಸ್ಥಳೀಯ ಸಾರ್ವಜನಿಕರು ಕೂಡ ತಮ್ಮ ಬದ್ಧತೆ ತೋರಬೇಕಿದೆ. ಪಂಚಾಯಿತಿ ಮಾಡಿಕೊಟ್ಟ ಉದ್ಯಾನವನ ಎಂಬ ಈ ಪ್ರದೇಶವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಮೂಲಕ ನಗರದ ಇತರೆ ಬಡಾವಣೆ ಗಳಿಗೆ ಈ ನೇತಾಜಿ ಬಡಾವಣೆ ಜನ ಮಾದರಿಯಾಗಬೇಕು. ಕೆಲವು ಬಡಾವಣೆಗಳಲ್ಲಿ ಬಡಾವಣೆ ಹಿತರಕ್ಷಣಾ ಸಮಿತಿಗಳನ್ನು ರಚಿಸಿ ವಾರಾಂತ್ಯ ಅಥವಾ ಮಾಸಾಂತ್ಯದ ದಿನಗಳಲ್ಲಿ ಒಗ್ಗೂಡಿ ಸ್ವಚ್ಛತೆ ಮಾಡುವ ಮೂಲಕ ಬಡಾವಣೆಗಳ ಬೀದಿಗಳು ಹಾಗೂ ಪಾರ್ಕ್ ಜಾಗಗಳನ್ನು ಸ್ವಚ್ಛಂದವಾಗಿ ನಿರ್ವಹಿಸುತ್ತಿದ್ದಾರೆ. ಉದಾಹರಣೆಗೆ ನಗರದ ಸೋಮೇಶ್ವರ ಬಡಾವಣೆಯ ಉದ್ಯಾನ, ಆದಿಶಂಕರಾಚಾರ್ಯ ಬಡಾವಣೆಯ ಉದ್ಯಾನಗಳು ಮಾದರಿಯಾಗಿವೆ.

ಪಂಚಾಯಿತಿಯ ಸ್ವಚ್ಛತಾ ಸೇನಾನಿಗಳೆಂಬ ಪೌರ ಕಾರ್ಮಿಕರು ನಮ್ಮಂತೆಯೇ ಮನುಷ್ಯರು. ಅವರ ಸೇವೆಯಲ್ಲಿ ನಮ್ಮದೂ ಕೂಡ ಅಳಿಲು ಸೇವೆ ಇರಬೇಕು ಊರಿನ ಸ್ವಚ್ಛತೆಯ ವಿಚಾರದಲ್ಲಿ. ನಮ್ಮ ಮನೆಗಳ ಮುಂದೆ, ಮನೆಗಳ ಸುತ್ತಮುತ್ತ ಇರುವ ಚರಂಡಿಗಳು, ರಸ್ತೆಗಳನ್ನು ಕಸ ಬಿಸಾಕದೇ ಅವರವರ ಮನೆಗಳ ಬಳಿ ಅವರವರು ಶುಚಿಗೊಳಿಸಿಕೊಳ್ಳುವ ಆಂದೋಲನ ರೂಪುಗೊಳ್ಳಬೇಕಿದೆ. ಪಂಚಾಯಿತಿಯ ಆರೋಗ್ಯ ಅಧಿಕಾರಿಗಳು ಕೂಡ ಸಿಬ್ಬಂದಿಗಳೊಂದಿಗೆ ನಗರದ ಬಡಾವಣೆಗಳ ಪ್ರದಕ್ಷಿಣೆ ಕೈಗೊಂಡು ಸ್ಥಳೀಯ ನಿವಾಸಿಗಳ ಜೊತೆ ಸಾಮರಸ್ಯ ಸಾಧಿಸಿ, ಸ್ವಚ್ಛತೆಯ ಅರಿವು ಮೂಡಿಸಬೇಕಿದೆ. ಈಗಾಗಲೇ ಬಡಾವಣೆಗಳ ಹಿತರಕ್ಷಣಾ ಸಮಿತಿ ರಚಿಸಿ ಸ್ವಚ್ಚತೆ ಮಾಡಿಕೊಳ್ಳುತ್ತಿರುವವರನ್ನು ಗುರ್ತಿಸಿ ಪಂಚಾಯಿತಿ ಕಡೆಯಿಂದ ಅಗತ್ಯ ಸಹಕಾರ ನೀಡುವ ಕೆಲಸವೂ ಆಗಬೇಕಿದೆ. ಕುಶಾಲನಗರದಲ್ಲಿ ಬಹುತೇಕ ಎಲ್ಲೆಡೆಗಳಲ್ಲೂ ಇಂತಹ ಕುಲಗೆಟ್ಟ, ಕಸ ತ್ಯಾಜ್ಯ ತುಂಬಿದ, ಕಾಡುಗಿಡಗಳು ಬೆಳೆದು ನಿಂತಿರುವ ಪಾರ್ಕ್‍ಗಳ ಸ್ವಚ್ಚತೆ ಹಾಗು ನವೀಕರಣಕ್ಕೆ ಕಾಲ ಇನ್ನಾದರೂ ಕೂಡಿ ಬರಲಿ..! -ಕೆ.ಎಸ್.ಮೂರ್ತಿ