ಗೋಣಿಕೊಪ್ಪಲು, ಅ. 13: ಕಳೆದೆರಡು ತಿಂಗಳುಗಳಿಂದ ವಿವಾದದಲ್ಲಿರುವ ವೀರಾಜಪೇಟೆ ನಗರದ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ಹಣ ದುರುಪಯೋಗದ ಬಗ್ಗೆ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ. ಈ ಬ್ಯಾಂಕ್ ಗೋಣಿಕೊಪ್ಪಲುವಿನಲ್ಲಿ ಶಾಖೆ ತೆರೆದು ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕಿನಲ್ಲಿ ದುರುಪಯೋಗದ ಆರೋಪ ಕೇಳಿಬರುತ್ತಿರುವಂತೆಯೇ ಈ ಬ್ಯಾಂಕಿನಲ್ಲಿ ವ್ಯವಹಾರ ನಡೆಸುತ್ತಿದ್ದ ಗ್ರಾಹಕರು ತಮ್ಮ ಹಣವನ್ನು ಬ್ಯಾಂಕಿನಿಂದ ಮರುಪಾವತಿಸಲು ದುಂಬಾಲು ಬಿದ್ದಿದ್ದಾರೆ. ಆದರೆ ಬ್ಯಾಂಕಿನಲ್ಲಿ ಗ್ರಾಹಕರ ಹಣವನ್ನು ಆಡಳಿತ ಮಂಡಳಿಯು ನೀಡದೆ ಇರುವುದರಿಂದ ಸಹಜವಾಗಿಯೇ ಗ್ರಾಹಕರು ಬ್ಯಾಂಕಿನಲ್ಲಿರುವ ವ್ಯವಸ್ಥಾಪಕರ ಮೇಲೆ ತಮ್ಮ ಹಣ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಬ್ಯಾಂಕಿನ ವ್ಯವಸ್ಥಾಪಕರು ಗ್ರಾಹಕರ ಹಣ ನೀಡಲಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ವೀರಾಜಪೇಟೆ ಬ್ಯಾಂಕಿನಲ್ಲಿ ನಡೆದಿರುವ ದುರುಪಯೋಗದ ಬಗ್ಗೆ ಆಡಳಿತ ಮಂಡಳಿ ಹಾಗೂ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿಗಳ ಮೇಲೆ ಇತ್ತೀಚೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸುವಂತೆ ಗೋಣಿಕೊಪ್ಪ ಶಾಖೆಯ ಪ್ರಭಾರ ವ್ಯವಸ್ಥಾಪಕ ಪಿ.ಕೆ.ಹಾಜಿರ ಮನವಿ ಮಾಡಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಿಂದ ಠಾಣಾಧಿಕಾರಿಗಳು ಈ ಸಂಬಂದ ಅರ್ಜಿ ಸ್ವೀಕರಿಸಿ ದೂರಿನ ಅರ್ಜಿಯಲ್ಲಿ ಆರೋಪಿಸಿರುವ ವೀರಾಜಪೇಟೆ ಬ್ಯಾಂಕಿನ ಸಿಇಒ ಕೆ.ಐ.ಮುಕ್ತಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಎಜಾಜ್ ಹಾಗೂ ಹನೀಫಾ ಅವರನ್ನು ಠಾಣೆಗೆ ಕರೆಸಿ ವಿಚಾರಿಸುವಂತೆ ಮನವಿ ಮಾಡಿದ್ದಾರೆ.
ಗೋಣಿಕೊಪ್ಪ ಠಾಣಾಧಿಕಾರಿ ಸುರೇಶ್ ಕುಮಾರ್ ಕಾರ್ಯನಿಮಿತ್ತ ಕರ್ತವ್ಯದಲ್ಲಿರುವುದರಿಂದ ದೂರುದಾರರು ನೀಡಿರುವ ಸಿಇಒ ಕೆ.ಐ.ಮುಕ್ತ್ತಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಎಜಾಜ್ ಹಾಗೂ ಹನೀಫಾ ಅವರನ್ನು ಠಾಣೆಗೆ ಕರೆಸಿ ವಿಚಾರಿಸಲು ಸಾಧ್ಯವಾಗಿಲ್ಲ. ಈಗಾಗಲೇ ಈ ಪ್ರಕರಣವು ವೀರಾಜಪೇಟೆ ನಗರ ಠಾಣೆಗೆ ಸಂಬಂಧಿಸಿರುವುದರಿಂದ ಹಾಗೂ ದೂರು ಇದೇ ಠಾಣೆಯಲ್ಲಿ ದಾಖಲಾಗಿರುವುದರಿಂದ ಇಲ್ಲಿನ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೂರುದಾರರ ಮನವಿಯಂತೆ ವಿಚಾರಣೆ ನಡೆಸಲು ಇನ್ನೂ ಕೂಡ ದಿನಾಂಕ ನಿಗದಿಪಡಿಸಿಲ್ಲ. ಗೋಣಿಕೊಪ್ಪ ನಗರದಲ್ಲಿರುವ ಮುಸ್ಲಿಂ ಬ್ಯಾಂಕಿನ ಶಾಖೆಯು ವೀರಾಜಪೇಟೆ ಪಟ್ಟಣದಲ್ಲಿರುವ ಬ್ಯಾಂಕಿಗೆ ಸಂಬಂಧಪಟ್ಟಿರುವುದರಿಂದ ಈ ಬ್ಯಾಂಕಿನಲ್ಲಿಯೇ ಆರೋಪಗಳು ಕೇಳಿ ಬಂದಿರುವುದರಿಂದ ಮುಂದಿನ ಸಾಧಕ ಬಾಧಕಗಳು ಈ ವ್ಯಾಪ್ತಿಯಲ್ಲಿಯೇ ಚರ್ಚೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.
ವೀರಾಜಪೇಟೆಯ ಕೇಂದ್ರ ಕಚೇರಿಯಿಂದ ಗೋಣಿಕೊಪ್ಪಲುವಿನ ಶಾಖಾ ಕಚೇರಿಯನ್ನು ನಿರ್ವಹಿಸುತ್ತ್ತಾ ಬಂದಿರುವ ಬ್ಯಾಂಕಿನ ಆಡಳಿತ ಅಧಿಕಾರಿಗಳು 2008ರಿಂದಲೂ ಗೋಣಿಕೊಪ್ಪಲು ಮುಸ್ಲಿಂ ಬ್ಯಾಂಕಿನಲ್ಲಿದ್ದ ಹಣವನ್ನು ಹೊಂದಿಕೊಳ್ಳುತ್ತಿದ್ದರು. ಗೋಣಿಕೊಪ್ಪ ಶಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ವ್ಯವಹಾರ ನಡೆಸುತ್ತಿದ್ದರೂ ಆಭರಣ ಸಾಲ ಹಾಗೂ ಪಿಗ್ಮಿ ಸಾಲ ಇತ್ಯಾದಿಗಳನ್ನು ಗ್ರಾಹಕರು ಪಡೆಯುತ್ತಿದ್ದರು. ಅಲ್ಲದೆ ಗ್ರಾಹಕರಿಂದ ಠೇವಣಿ ಸಂಗ್ರಹಿಸಲಾಗುತ್ತಿತ್ತು. ಗ್ರಾಹಕರೊಂದಿಗೆ ಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉತ್ತಮ ಬಾಂಧವ್ಯ ಹೊಂದಿದ್ದರು. ಇದೀಗ ಗ್ರಾಹಕರ ಹಣವನ್ನು ಮರುಪಾವತಿಸಲು ಕೇಂದ್ರ ಬ್ಯಾಂಕ್ ಸಹಕಾರ ನೀಡುತ್ತಿಲ್ಲ ಎಂಬ ಬಗ್ಗೆ ದೂರುದಾರರಾದ ಹಾಜಿರ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಗೋಣಿಕೊಪ್ಪ ಶಾಖೆಯ ಪ್ರಭಾರ ಅಧಿಕಾರಿ ಹಾಜಿ ಅವರಿಗೆ ಸಕಾಲದಲ್ಲಿ ಸ್ಪಂದಿಸಬೇಕಾದ ಆಡಳಿತ ಮಂಡಳಿಯ ಯಾವ ಸದಸ್ಯರು ಸಂಪರ್ಕಕಕ್ಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಅನ್ಯ ಮಾರ್ಗವಿಲ್ಲದೆ ಸ್ವತಃ ಹಾಜಿ ಅವರೆ ಹಣ ದುರುಪಯೋಗದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಠಾಣಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ದೂರಿನ ಪ್ರತಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಗ್ರಾಹಕರು ಇದೀಗ ಬ್ಯಾಂಕಿನ ಮೇಲೆ ನಂಬಿಕೆ ಕಳೆದುಕೊಂಡು ನಮ್ಮ ಹಣ ವಾಪಸು ನೀಡುವಂತೆ ಪ್ರತಿನಿತ್ಯ ಬ್ಯಾಂಕಿಗೆ ಅಲೆದಾಡುತ್ತಿದ್ದಾರೆ. ಬ್ಯಾಂಕಿನ ಅಧಿಕಾರಿಗಳೇ ಆಡಳಿತ ಮಂಡಳಿಯ ಮೇಲೆ ವಿಶ್ವಾಸವಿಲ್ಲದೆ ಠಾಣೆಯ ಮೆಟ್ಟಿಲೇರಿರುವುದು ಚರ್ಚೆಗೆ ಗ್ರಾಸವಾಗಿದೆ.
- ಹೆಚ್.ಕೆ. ಜಗದೀಶ್