ಮಡಿಕೇರಿ, ಅ. 12 : ಕುಶಾಲನಗರದ ಮೂವರು ಖಾಸಗಿ ವ್ಯಕ್ತಿಗಳು ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೊಡಗು ಜಿಲ್ಲೆಯ ಶಿಕ್ಷಕ-ಶಿಕ್ಷಕಿಯರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡುವುದಾಗಿ ಪ್ರಚಾರ ಮಾಡುವುದರೊಂದಿಗೆ ಅಮಾಯಕರಿಗೆ ವಂಚಿಸುತ್ತಿದ್ದಾರೆ ಕೊಡಗು ವಿದ್ಯಾ ಇಲಾಖೆ ನೌಕರರ ಪತ್ತಿನ ಸೌಹಾರ್ದ ಸಹಕಾರಿಯ ಸದಸ್ಯರು ಆರೋಪಿಸಿದ್ದಾರೆ.
ಅಲ್ಲದೆ ಈ ಅಕ್ರಮ ವ್ಯವಹಾರದಲ್ಲಿ ಸಹಕಾರಿಯ ಆಡಳಿತ ಮಂಡಳಿಯೂ ಶಾಮೀಲಾಗಿರುವ ಶಂಕೆ ಇದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರಿಯ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಗೌರವಾಧ್ಯಕ್ಷ ಕೆ.ಎಸ್. ಪ್ರಸನ್ನ ಕುಮಾರ್ ಹಾಗೂ ಇತರರು, ಕುಶಾಲನಗರದ ಜಿತೇಶ್, ನಾಗೇಶ್ ಹಾಗೂ ಪ್ರಕಾಶ್ ಎಂಬವರುಗಳು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಸಮೀಪ ವಸ್ತಿ ಬಡಾವಣೆಯೊಂದನ್ನು ನಿರ್ಮಿಸಿದ್ದು, ಅದಕ್ಕೆ ಯಾವುದೇ ಅನುಮತಿ ಪಡೆಯದೆ ಕೊಡಗು ವಿದ್ಯಾ ಇಲಾಖಾ ನೌಕರರ ಬಡಾವಣೆ ಎಂದು ಹೆಸರಿಸಿದ್ದಾರೆ. ಆದರೆ ಈ ವ್ಯಕ್ತಿಗಳಿಗೂ ಕೊಡಗು ವಿದ್ಯಾ ಇಲಾಖಾ ನೌಕರರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಕಳೆದ ಒಂದು ವರ್ಷದಿಂದ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ನೂರಾರು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಆ ಮೂಲಕ ಕೋಟ್ಯಂತರ ರೂ. ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಈ ವ್ಯಕ್ತಿಗಳು ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಹೆಸರನ್ನು ಅನಧಿಕೃತವಾಗಿ ಬಳಸಿಕೊಳ್ಳುವುದರೊಂದಿಗೆ ನಿವೇಶನ ಕೊಳ್ಳುವವರಿಗೆ ಶೇ.70ರಷ್ಟು ಸಾಲ ನೀಡುವುದಾಗಿಯೂ ಭರವಸೆ ನೀಡುತ್ತಿದ್ದಾರೆ. ಆದರೆ ಈ ಸಂಬಂಧ ಸಹಕಾರಿ ಸಂಸ್ಥೆಯೊಂದಿಗೆ ಯಾವುದೇ ಒಪ್ಪಂದವನ್ನು ಆ ವ್ಯಕ್ತಿಗಳು ಮಾಡಿಕೊಂಡಿಲ್ಲ. ಈ ಬಗ್ಗೆ ಭಾನುವಾರ ನಡೆದ ಸಹಕಾರಿ ಸಂಸ್ಥೆಯ ಮಹಾಸಭೆಯಲ್ಲಿ ಪ್ರಸ್ತಾಪವಾದಾಗ ಸೂಕ್ತ ಉತ್ತರ ನೀಡಲು ಆಡಳಿತ ಮಂಡಳಿಯವರು ವಿಫಲರಾಗಿದ್ದಾರೆ. ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪೊಲೀಸ್ ದೂರು ನೀಡುವಂತೆ ಆಡಳಿತ ಮಂಡಳಿಯನ್ನು ಸದಸ್ಯರು ಒತ್ತಾಯಿಸಿದಾಗಲೂ ಆಡಳಿತ ಮಂಡಳಿಯ ಅಧ್ಯಕ್ಷರಾದಿಯಾಗಿ ಬಹುತೇಕ ನಿರ್ದೇಶಕರು ಮೌನಕ್ಕೆ ಶರಣಾಗಿದ್ದು, ಇದರಿಂದಾಗಿ ಖಾಸಗಿ ವ್ಯಕ್ತಿಗಳ ಈ ಅಕ್ರಮದಲ್ಲಿ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿಯೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ವಿವರಿಸಿದರು.
ಈ ಸಂಬಂಧವಾಗಿ ತಾವುಗಳು ಈಗಾಗಲೇ ಮಡಿಕೇರಿ ನಗರ ಠಾಣೆಯಲ್ಲಿ ದಾಖಲೆಗಳ ಸಹಿತ ದೂರು ದಾಖಲಿಸಿದ್ದು, ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿರುವುದಾಗಿಯೂ ನುಡಿದರು.
ಖಾಸಗಿ ವ್ಯಕ್ತಿಗಳು ಕೊಡಗು ವಿದ್ಯಾ ಇಲಾಖಾ ನೌಕರರ ಹೆಸರಿನಲ್ಲಿ ಜಿಲ್ಲೆಯ ಅಮಾಯಕ ಶಿಕ್ಷಕ-ಶಿಕ್ಷಕಿಯರು ಹಾಗೂ ನಿವೃತ್ತರಾಗಿರುವ ಹಿರಿಯ ನಾಗರಿಕರನ್ನು ವಂಚಿಸುವ ಎಲ್ಲಾ ಸಾಧ್ಯತೆಗಳಿರುವುದಾಗಿ ಹೇಳಿದ ಅವರು, ಈ ಬಗ್ಗೆ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದೂ ಆಗ್ರಹಿಸಿದರು.
ಗೋಷ್ಠಿಯಲ್ಲಿ ಹಾಜರಿದ್ದ ಸೋಮವಾರಪೇಟೆ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್ ಅವರು ಮಾತನಾಡಿ, ಕೊಡಗು ವಿದ್ಯಾ ಇಲಾಖೆ ನೌಕರರ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಬಡಾವಣೆ ನಿರ್ಮಿಸಿರುವುದಲ್ಲದೆ, ವಿದ್ಯಾ ಇಲಾಖೆ ನೌಕರರಿಗೆ ವಿವಿಧ ಆಮಿಷಗಳನ್ನು ಒಡ್ಡಿ ನಿವೇಶನ ಖರೀದಿಸಲು ಒತ್ತಾಯಿಸುತ್ತಿರುವ ಬಗ್ಗೆ ಸಂಘಕ್ಕೆ ದೂರು ಬಂದಿದ್ದು, ಈ ಸಂಬಂಧ ಸಂಘದ ವತಿಯಿಂದ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ತು ಸದಸ್ಯ ಪಿ.ಎಸ್.ಜನಾರ್ಧನ, ಕೊಡಗು ವಿದ್ಯಾ ಇಲಾಖೆ ನೌಕರರ ಪತ್ತಿನ ಸೌಹಾರ್ದದ ಮಾಜಿ ನಿರ್ದೇಶಕಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಹೆಚ್.ವಿ.ಜಯಮ್ಮ, ಸದಸ್ಯ ಹೆಚ್.ಎಸ್.ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.