ಪಾಲಿಬೆಟ್ಟ, ಅ. 14: ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಪಾಲಿಬೆಟ್ಟ ಬಸ್ ನಿಲ್ದಾಣದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ವೇದಿಕೆಯ ಪ್ರಮುಖ ವಿ.ಪಿ ಶಶಿಧರ್ ಮಾತನಾಡಿ ವಿಶ್ವವೇ ತಲೆ ತಗ್ಗಿಸುವಂತಹ ಅತ್ಯಾಚಾರ ಘಟನೆ ನಡೆದಿದ್ದು ಆರೋಪಿಗಳ ರಕ್ಷಣೆಗೆ ನಿಂತಿರುವ ಯೋಗಿ ಸರ್ಕಾರ ಕೂಡಲೇ ರಾಜೀನಾಮೆ ಕೊಡಬೇಕು. ದಲಿತ ಅಮಾಯಕ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ಇಂಥ ಘಟನೆಗಳು ನಡೆಯುತ್ತಿದ್ದು ಸರ್ಕಾರಗಳಿಂದ ರಕ್ಷಣೆ ಇಲ್ಲದಂತಾಗಿದೆ.

ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾದ ಸರ್ಕಾರ ಆರೋಪಿಗಳ ಪರ ನಿಂತು ಯಾವುದೇ ಕ್ರಮ ಕೈಗೊಳ್ಳದೆ ಕಾಟಾಚಾರಕ್ಕೆ ತನಿಖೆ ನಡೆಸುತ್ತಿದೆ. ನಿರ್ಭಯಾ ಪ್ರಕರಣದಂತೆಯೇ ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಮಹದೇವ್ ಮಾತನಾಡಿ ದೇಶದಲ್ಲಿ ಹಲವೆಡೆ ಅತ್ಯಾಚಾರ ಕೊಲೆಯಂತಹ ಘಟನೆಗಳು ನಿರಂತರ ವಾಗಿ ನಡೆಯುತ್ತಿದ್ದು ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕಾದ ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣೇಶ್ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ನಿರಂತರವಾಗಿ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಯುತ್ತಿದ್ದು.ಅಮಾಯಕರಿಗೆ ನ್ಯಾಯ ಸಿಗದಂತಾಗಿದೆ. ಆಮಿಷಗಳನ್ನು ನೀಡಿ ಬಿಜೆಪಿ ಹಾಗೂ ಆರ್‍ಎಸ್‍ಎಸ್‍ಗೆ ಪರಿಶಿಷ್ಟ ಯುವಕರನ್ನು ಸೇರಿಸಿಕೊಳ್ಳುವ ಮೂಲಕ ಪ್ರಚೋದನೆ ಹಾಗೂ ಅಶಾಂತಿ ಸೃಷ್ಟಿ ಮಾಡಲು ಬಳಸಿ ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ದರು. ಪರಿಶಿಷ್ಟರು ಎಲ್ಲರೂ ಒಗ್ಗಟ್ಟಾಗಿ ಎಚ್ಚೆತ್ತುಕೊಳ್ಳದಿದ್ದಲ್ಲಿ. ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತದೆ ಎಂದರು.

ಸಮಾನ ಮನಸ್ಕರ ವೇದಿಕೆಯ ಪ್ರಮುಖರಾದ ಅಬ್ದುಲ್ ನಾಸೀರ್, ಅಬೀದ್, ನಾಸರ್, ರಾಮದಾಸ್, ವೆಂಕಟೇಶ್, ತಂಗರಾಜ್, ಷಣ್ಮುಗ, ನಾರಾಯಣ, ಜಾವೀದ್, ಹಮೀದ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. -ಪುತ್ತಂ ಪ್ರದೀಪ್