ಮಡಿಕೇರಿ, ಅ. 14: ಕಾವೇರಿ ಮಾತೆಯ ನೈಜ ಭಕ್ತರನ್ನು ಕತ್ತಲೆಯಲ್ಲಿಟ್ಟು ಕಾವೇರಿ ತುಲಾ ಸಂಕ್ರಮಣ ಮಾಡಲು ಹುನ್ನಾರ ನಡೆದಿದ್ದು, ಅಖಿಲ ಕೊಡವ ಸಮಾಜ ಕೇಂದ್ರ ಸಮಿತಿ ಹಾಗೂ ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಇದನ್ನು ಖಂಡಿಸುತ್ತದೆ ಎಂದಿರುವ ಪದಾಧಿಕಾರಿಗಳು ತೀರ್ಥೋದ್ಭವದಲ್ಲಿ ಮೂಲನಿವಾಸಿಗಳಿಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಜಿಲ್ಲಾಡಳಿತ ಹಾಗೂ ಸರಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೀರ್ಥೋದ್ಭವಕ್ಕೆ ಕಾಲಾವಕಾಶ ವಿದ್ದರು ಕೊನೆಯ ಗಳಿಗೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಅಧಿಕವಾಗಿ ಭಕ್ತರು ಬರುತ್ತಾರೆ ಎಂಬ ಹಿನ್ನಲೆಯಲ್ಲಿ ತೀರ್ಥೋದ್ಭವ ಸಂದರ್ಭ ಸೀಮಿತ ಜನರನ್ನು ಬಿಟ್ಟರೆ ಇತರ ಯಾರಿಗೂ ಕ್ಷೇತ್ರದ ಒಳಗೆ ಪ್ರವೇಶವಿಲ್ಲ ಎನ್ನುವ ಆಜ್ಞೆ ಹೊರಡಿಸಿದ್ದು ಹಾಗೂ 9 ಅಥವಾ 10 ಗಂಟೆಯ ನಂತರ ಕ್ಷೇತ್ರದ ಒಳಗೆ ಬಿಡುತ್ತಾರೆ ಎಂಬ ನಿಯಮ ಹೊರಡಿಸಿರುವುದು ಕಾವೇರಿಯ ನೈಜ ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆ ಉಂಟಾಗಿದೆ ಎಂದಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಡಿಯಲ್ಲಿ ಅನ್ಯ ಧರ್ಮದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗೆ ಹಾಗೂ ಅವರ ಸಹಾಯಕರಿಗೆ ಜವಾಬ್ದಾರಿಯನ್ನು ನೀಡದೆ ಆ ಹಬ್ಬದ ಉಸ್ತುವಾರಿಯನ್ನು ಅದೇ ಧರ್ಮದ ಅಧಿಕಾರಿಗಳಿಗೆ ನೀಡಬೇಕು ಎಂಬ ನಿಯಮವಿದೆ. ಸರಕಾರ ಹಾಗೂ ಸಂಬಂಧಪಟ್ಟವರು ಈ ನಿಯಮವನ್ನು ಏಕೆ ಪಾಲಿಸಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಂಡು ಮೂಲನಿವಾಸಿಗಳ ಭಾವನೆಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ. ತೀರ್ಥೋದ್ಭವಕ್ಕೆ ಸಾಕಷ್ಟು ಕಾಲಾವಕಾಶವಿದ್ದರೂ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೆ ಮೂಲನಿವಾಸಿಗಳ ಮೇಲೆ ಗದಾಪ್ರಹಾರಕ್ಕೆ ನಿಂತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಸದ್ಯದ ಮಟ್ಟಿಗೆ ಪ್ರಸ್ತುತ ವರ್ಷ ಹೊರಜಿಲ್ಲೆ, ಹೊರ ರಾಜ್ಯದ ಭಕ್ತರಿಗೆ ಕಡಿವಾಣ ಹಾಕಿ ಜಿಲ್ಲೆಯ ನೈಜ ಭಕ್ತರಿಗೆ ಅವಕಾಶ ಮಾಡಿ ಕೊಡಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಜಿಲ್ಲೆಯ ರೆಸಾರ್ಟ್ ಹೋಂಸ್ಟೇ ಹಾಗೂ ಲಾಡ್ಜ್ಗಳನ್ನು ಒಂದು ವಾರದ ಮಟ್ಟಿಗೆ ಮುಚ್ಚಿ ಪ್ರವಾಸಿಗರಿಗೆ ನಿರ್ಬಂಧ ಹಾಕಬೇಕಿತ್ತು. ಹಾಗೆಯೇ ಗಡಿಯಲ್ಲಿ ತಪಾಸಣೆ ಮಾಡಿ ಮೂಲನಿವಾಸಿ ಎನ್ನುವ ಯಾವುದಾದರೊಂದು ದಾಖಲೆ ಇದ್ದರೆ ಮಾತ್ರ ಬಿಡುವ ವ್ಯವಸ್ಥೆ ಮಾಡಬೇಕಿತ್ತು. ಇದ್ಯಾವುದನ್ನು ಮಾಡದೆ ಇದೀಗ ಏಕಾ ಏಕಿ ಕೋವಿಡ್ ಸರ್ಟಿಫಿಕೇಟ್ ಖಡ್ಡಾಯ ಎಂದು ಅಥವಾ ಕ್ಷೇತ್ರದೊಳಗೆ ಬಿಡುವುದಿಲ್ಲ ಎನ್ನುವುದು ಸರಿಯಲ್ಲವೆಂದಿದ್ದಾರೆ. ಕೊಡವ ಧಾರ್ಮಿಕ ಭಾವನೆಯೊಂದಿಗೆ ಜಿಲ್ಲಾಡಳಿತವಾಗಲಿ ಅಥವಾ ಸರಕಾರವಾಗಲಿ ಆಟವಾಡುವುದು ಬೇಡ ಎಂದು ಈರ್ವರು ಎಚ್ಚರಿಸಿದ್ದಾರೆ.
ಕ್ಷೇತ್ರದ ಜನಪ್ರತಿನಿಧಿಗಳು ಈ ವಿಷಯದಲ್ಲಿ ಜಾರಿಕೊಳ್ಳುವುದು ಬೇಡ, ಮುಂದೆ ಇದಕ್ಕೆ ಬಹಳ ದಂಡ ತೆರಬೇಕಾಗುತ್ತೆ ಎಂದು ಮಾತಂಡ ಮೊಣ್ಣಪ್ಪ ಹಾಗೂ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಜಂಟಿಯಾಗಿ ಹೇಳಿಕೆ ನೀಡಿದ್ದಾರೆ.