ಭಾಗಮಂಡಲ, ಅ. 14: ತುಲಾ ಸಂಕ್ರಮಣದ ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗುತ್ತಿರುವಂತೆ ಪುಣ್ಯ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿಂದು ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಹಾಗೂ ನಂದಾದೀಪ ಉರಿಸುವ ಕಾರ್ಯ ನಡೆಯಿತು.ಇಂದು ಬೆಳಿಗ್ಗೆ 11.45ರ ಧನುರ್ ಲಗ್ನದಲ್ಲಿ ಭಗಂಡೇಶ್ವರ ಸನ್ನಿಧಿಯಲ್ಲಿ ಅಕ್ಷಯ ಪಾತ್ರೆಯನ್ನು ಇರಿಸಿ ಭಕ್ತರು ಬೆಳೆದು ತಂದಿದ್ದ ಅಕ್ಕಿಯನ್ನು ಅಕ್ಷಯ ಪಾತ್ರೆಗೆ ಸುರಿಯಲಾಯಿತು. ದೇವಾಲಯ ತಕ್ಕರು, ದೇವಾಲಯ ವ್ಯವಸ್ಥಾಪನಾ ಸಮಿತಿಯವರು ಅಕ್ಕಿ ಹಾಕಿದರು. ಅಕ್ಷಯ ಪಾತ್ರೆಗೆ ಸುರಿದ ಅಕ್ಕಿಯನ್ನು ‘ಪಡೆಯಕ್ಕಿ’ ಎಂದು ಪ್ರಸಾದ ರೂಪದಲ್ಲಿ ಭಕ್ತರಿಗೆ ಹಂಚಲಾಯಿತು. ಮಹಿಳೆಯರು ಅಕ್ಕಿಯನ್ನು ತಮ್ಮ ಸೀರೆಯ ಸೆರಗಿನಲ್ಲಿ ಸ್ವೀಕರಿಸಿ ಮನೆಗಳಿಗೆ ಕೊಂಡೊಯ್ದರು. ಈ ಅಕ್ಕಿಯನ್ನು ಮನೆಯ ಅಕ್ಕಿಪೆಟ್ಟಿಗೆಗೆ ಹಾಕಿದರೆ ಐಶ್ವರ್ಯ ವೃದ್ಧಿಯಾಗಲಿದೆ ಎಂದು ಪ್ರತೀತಿಯಿದೆ. ನಂದಾದೀಪ ಇದೇ ಸಂದರ್ಭದಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯೊಂದಿಗೆ ದೇಗುಲದಲ್ಲಿ ನಂದಾದೀಪ ಉರಿಸಲಾಯಿತು. ತುಲಾ ಸಂಕ್ರಮಣ ಜಾತ್ರೆ ಸಂದರ್ಭ ಯಾವದೇ ವಿಘ್ನಗಳು ಬಾರದಂತೆ ಪ್ರಾರ್ಥಿಸಿ ದೀಪ ಉರಿಸಲಾಯಿತು. ಈ ದೀಪವು ಇಂದಿನಿಂದ ನವೆಂಬರ್ 17ರ ತನಕ ಉರಿಯುತ್ತಲಿರುತ್ತದೆ. ದೀಪ ನಂದದಂತೆ ನೋಡಿಕೊಳ್ಳಲು ಓರ್ವ ವ್ಯಕ್ತಿಯನ್ನು ಕೂಡ ನಿಯೋಜಿಸಲಾಗಿದೆ.

ಸಂಗಮಕ್ಕೆ ಇಳಿಯುವಂತಿಲ್ಲ

ತುಲಾ ಸಂಕ್ರಮಣ ಜಾತ್ರೆ ಹಿನ್ನೆಲೆ ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರುಗಳು ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇದೀಗ ಮಳೆ ಸುರಿಯುತ್ತಿರುವದರಿಂದ ಸಂಗಮದಲ್ಲಿ

(ಮೊದಲ ಪುಟದಿಂದ) ನೀರಿನ ಮಟ್ಟ ಏರಿಕೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ಯಾರಿಗೂ ನೀರಿಗೆ ಇಳಿಯಲು ಅವಕಾಶ ನೀಡುವದಿಲ್ಲ. ಸಂಗಮದ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧ ಹಾಕಲಾಗುವದು. ಪಿಂಡ ಪ್ರದಾನ ಮಾಡುವವರು ಕೂಡ ನೀರಿಗೆ ಇಳಿಯದೆ ಬಿಂದಿಗೆಯಲ್ಲಿ ನೀರು ತಂದು ಸುರಿದುಕೊಂಡು ಸ್ನಾನ ಮಾಡಬೇಕಾಗಿದೆ. ನೀರಿನ ಮಟ್ಟ ಹೆಚ್ಚಿರುವದರಿಂದ ಅನಾಹುತ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಶಾಮಿಯಾನ - ಲೈಟ್ ಇಲ್ಲ

ಈ ಬಾರಿ ಬೆಳಿಗ್ಗೆ ತೀರ್ಥೋದ್ಭವ ಆಗುವದರಿಂದ ವಿದ್ಯುತ್ ದೀಪದ ವ್ಯವಸ್ಥೆ ಹಾಗೂ ಗಣ್ಯರಿಗೆ ಕುಳಿತುಕೊಳ್ಳಲು ಅಳವಡಿಸುತ್ತಿದ್ದ ‘ವಾಟರ್ ಪ್ರೂಫ್’ ಶಾಮಿಯಾನದ ಅವಶ್ಯಕತೆ ಇರುವದಿಲ್ಲ, ಎಲ್‍ಇಡಿ ಟಿ.ವಿ. ಪರದೆಯ ಅವಶ್ಯಕತೆ ಕೂಡ ಬೇಡವೆಂದು ಜಿಲ್ಲಾಧಿಕಾರಿಗಳು ದೇವಾಲಯ ವ್ಯವಸ್ಥಾಪನಾ ಸಮಿತಿಯವರಿಗೆ ಸೂಚಿಸಿದರು. ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಟಿ.ವಿ. ಪರದೆ ಇಲ್ಲವಾದರೆ ಕುಂಡಿಕೆ ಬಳಿ ಜನಜಂಗುಳಿ ಉಂಟಾಗಲಿದೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಟಿ.ವಿ. ಪರದೆ ಇರಿಸಿದರೆ ಅಲ್ಲಿಯೂ ಜನಜಂಗುಳಿ ಉಂಟಾಗಲಿದೆ. ಕುಂಡಿಕೆ ಬಳಿ ಸಾಮಾಜಿಕ ಅಂತರದೊಂದಿಗೆ ತೀರ್ಥೋದ್ಭವ ಬಳಿಕ ಬೆಳಿಗ್ಗೆ 9 ಗಂಟೆಯ ನಂತರ ಪ್ರವೇಶಕ್ಕೆ ಅವಕಾಶ ನೀಡಲಾಗುವದೆಂದು ಹೇಳಿದರು.

ಕುಂಡಿಕೆಯಿಂದ ತೀರ್ಥವಿಲ್ಲ

ತೀರ್ಥ ಕುಂಡಿಕೆ ಬಳಿ ಯಾರಿಗೂ ತೀರ್ಥ ವಿತರಣೆ, ಪ್ರೋಕ್ಷಣೆ ಇರುವದಿಲ್ಲ, ಕುಂಡಿಕೆಯ ಮೇಲ್ಭಾಗದಲ್ಲಿ ತೀರ್ಥ ವಿತರಣೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ತಾಮ್ರದ ಕೊಡ ಕೊಡುಗೆ

ತೀರ್ಥೋದ್ಭವ ಸಂದರ್ಭ ತೀರ್ಥ ಗೋಚಲು ಅನುಕೂಲವಾಗುವ ನಿಟ್ಟಿನಲ್ಲಿ ಕೊಡವ ಪಡೆಯವರಿಂದ ಕ್ಷೇತ್ರಕ್ಕೆ ತಾಮ್ರದ ಕೊಡಗಳನ್ನು ಕೊಡುಗೆಯಾಗಿ ನೀಡಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ತಮ್ಮಯ್ಯ ಅವರಿಗೆ ಕೊಡಗಳನ್ನು ಹಸ್ತಾಂತರಿಸಲಾಯಿತು.

ಕೋವಿಡ್ ಪರೀಕ್ಷೆ

ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಇಂದು ಕೋವಿಡ್ ಪರೀಕ್ಷೆ ನಡೆಸಲಾಯಿತು. ಕ್ಷೇತ್ರದಲ್ಲಿರುವ ಅಂಗಡಿ, ಮಳಿಗೆಗಳಲ್ಲಿರುವವರಿಗೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಯಿತು.

ಈ ಸಂದರ್ಭ ಉಭಯ ಕ್ಷೇತ್ರಗಳ ತಕ್ಕಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ದೇವಾಲಯ ಸಮಿತಿ ಸದಸ್ಯರುಗಳಾದ ಡಾ. ಸಣ್ಣುವಂಡ ಕಾವೇರಪ್ಪ, ಬಿದ್ದಿಯಂಡ ಸುಭಾಶ್, ಕೆ.ಟಿ. ರಮೇಶ್, ಮೀನಾಕ್ಷಿ, ಸ್ಥಳೀಯ ಪ್ರಮುಖರಾದ ಹೊಸೂರು ಸತೀಶ್ ಜೋಯಪ್ಪ, ಕುದುಪಜೆ ಪ್ರಕಾಶ್, ದೇವಾಲಯ ಸಮಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪಾರುಪತ್ತೆಗಾರ ಪೊನ್ನಣ್ಣ, ತಹಶೀಲ್ದಾರ್ ಮಹೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ, ಡಿವೈಎಸ್‍ಪಿ ದಿನೇಶ್‍ಕುಮಾರ್, ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಇನ್ನಿತರರಿದ್ದರು.

- ಸುನಿಲ್ ಕುಯ್ಯಮುಡಿ