ನಾಪೋಕ್ಲು, ಅ. 14: ಸಮೀಪದ ಕುಂಜಿಲ ಗ್ರಾಮದಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಂಜಿಲ ಗ್ರಾಮದ ಹಂಸ ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಅಮೀನ ಅವರ ಪುತ್ರಿ ಮಮ್ತಾಜ್ (20) ಆತ್ಮಹತ್ಯೆಗೆ ಶರಣಾದವಳು.

ಘಟನೆ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೃತಳ ತಾಯಿ ಆಮಿನ, ಮಗಳ ಸಾವಿಗೆ ಗ್ರಾಮದ ಅಶ್ರಫ್ ಎಂಬ ಯುವಕನೇ ಕಾರಣ ಎಂದು ಆತನ ವಿರುದ್ದ ದೂರು ದಾಖಲಿಸಿದ್ದಾರೆ.

ಅಶ್ರಫ್ ಎಂಬಾತ ಕಳೆದ ಒಂದೂವರೆ ವರ್ಷದಿಂದ ತನ್ನ ಮಗಳನ್ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದು ಆತನ ಕಿರುಕುಳ ತಾಳಲಾರದೆ ವಿಷ ಸೇವಿಸಿರುವುದಾಗಿ ಮಗಳು ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ ನಾಪೋಕ್ಲು ಠಾಣಾಧಿಕಾರಿ ಆರ್.ಕಿರಣ್ ಮೊಕದ್ದಮೆ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.