ಕೂಡಿಗೆ, ಅ. 14 : ಜಿಲ್ಲಾ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಸಂಪೂರ್ಣವಾಗಿ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ನದಿಗೆ ಎರಡೂ ಸಾವಿರ ಕ್ಯೊಸೆಕ್ ನೀರನ್ನು ಹರಿಸಲಾಗುತ್ತಿದೆ
ಅಣೆಕಟ್ಟೆಗೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಇಂದು ಅಣೆಕಟ್ಟೆಗೆ ಒಳಹರಿವು 4,700 ಕ್ಯೊಸೆಕ್ ನೀರು ಹರಿದು ಬರುತ್ತಿದ್ದು ಒಳಹರಿವಿನ ಪ್ರಮಾಣವನ್ನು ನೋಡಿಕೊಂಡು ನದಿಗೆ ಕ್ರೇಸ್ ಗೇಟ್ ಮೂಲಕ 1,000 ಕ್ಯೊಸೆಕ್ ಮತ್ತು ವಿದ್ಯುತ್ ಘಟಕದ ಮೂಲಕ 1.000 ಕ್ಯೊಸೆಕ್ ಒಟ್ಟು ಎರಡು ಸಾವಿರದ ಕ್ಯೊಸೆಕ್ ನೀರನ್ನು ನದಿಗೆ ಹರಿಸಲಾ ಗುತ್ತಿದೆ. ಅಲ್ಲದೆ ಮುಖ್ಯ ನಾಲೆಗೆ 1600 ಕ್ಯೊಸೆಕ್ ನೀರನ್ನು ಹರಿಸಲಾಗುತ್ತಿದೆ.
ಶಾಸಕರ ಸೂಚನೆ : ಹಾರಂಗಿ ಅಣೆಕಟ್ಟೆಯಾಗಿರುವ ಭರ್ತಿಯಾಗುತ್ತಿ ರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಹೆಚ್ಚುವರಿಯಾಗಿ ಒಳಹರಿವಿನ ನೀರನ್ನು ಸಂಗ್ರಹ ಮಾಡದೆ ಹೆಚ್ಚು ನೀರನ್ನು ನದಿಗೆ ಹರಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳು ದಿನದ 24 ಗಂಟೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ಒಳಹರಿವಿನ ಹೆಚ್ಚುವರಿ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ ತಿಳಿಸಿದ್ದಾರೆ.