ಮಡಿಕೇರಿ, ಅ. 14: ಕೊರೊನಾ ಪರಿಸ್ಥಿತಿಯಿಂದಾಗಿ ಹಲವಷ್ಟು ಉದ್ಯಮಗಳಿಗೆ ಸಮಸ್ಯೆ ಎದುರಾ ದಂತೆ ಚಿತ್ರಮಂದಿರಗಳೂ ಸಂಕಷ್ಟದಲ್ಲಿವೆ. ಕೋವಿಡ್-19ರ ಕಾರಣದಿಂದಾಗಿ ಸರಕಾರದ ಕಟ್ಟುನಿಟ್ಟಿನ ಆದೇಶದಂತೆ ಕಳೆದ ಮಾರ್ಚ್ 14 ರಿಂದಲೇ ಚಿತ್ರಮಂದಿರಗಳು ಮುಚ್ಚಲ್ಪಟ್ಟಿವೆ. ಕೊರೊನಾ ತಡೆಯ ಮುನ್ನೆಚ್ಚರಿಕೆ ಯಿಂದ ವಿಧಿಸಲಾಗಿದ್ದ ಹಲವಾರು ನಿರ್ಬಂಧಗಳು ಪ್ರಸ್ತುತ ಕ್ರಮೇಣವಾಗಿ ಸಡಿಲಿಕೆಗೊಂಡಿದ್ದು, ಸಹಜತೆಯತ್ತ ಬರುತ್ತಿವೆಯಾದರೂ ಚಿತ್ರಮಂದಿರಗಳಿಗೆ ಮಾತ್ರ ಈ ಅವಕಾಶ ನೀಡಲಾಗಿರಲಿಲ್ಲ.ಇದೀಗ ಕೇಂದ್ರದ ಮಾರ್ಗ ಸೂಚಿಯಂತೆ ಅಕ್ಟೋಬರ್ 15 ರಿಂದ (ಇಂದಿನಿಂದ) ಚಿತ್ರಮಂದಿರಗಳನ್ನು ತೆರೆಯಬಹುದೆಂಬ ವಿನಾಯಿತಿ ಕಲ್ಪಿಸಿದೆಯಾದರೂ, ಬಹುತೇಕ ಚಿತ್ರ ಮಂದಿರಗಳು ಈಗಿನ ಸನ್ನಿವೇಶದಲ್ಲಿ ‘ಪರದೆ’ ಮೇಲೆತ್ತುವ ಸ್ಥಿತಿಯಲ್ಲಿಲ್ಲ ಎನ್ನಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಕುಶಾಲನಗರ, ಸಿದ್ದಾಪುರ, ಸುಂಟಿಕೊಪ್ಪ ಹಾಗೂ ಶನಿವಾರಸಂತೆ ಯಲ್ಲಿ ಸೇರಿ ಕೇವಲ ಐದು ಚಿತ್ರ ಮಂದಿರಗಳಿದ್ದು, ಇವು ಯಾವುದೂ ಬಾಗಿಲು ತೆರೆಯುತ್ತಿಲ್ಲ. ‘ಥಿಯೇಟರ್ ಓಪನ್’ಗೆ ಸಂಬಂಧಿಸಿ ದಂತೆ ಹೊರಡಿಸಲಾಗಿರುವ ಮಾರ್ಗಸೂಚಿ ಷರತ್ತಿನಂತೆ ಚಿತ್ರಮಂದಿರ ತೆರೆಯಲು ಈಗಿನ ಸ್ಥಿತಿಯಲ್ಲಿ ಸಾಧ್ಯವಾಗದು ಎನ್ನುತ್ತಾರೆ ಕುಶಾಲನಗರ ಚಿತ್ರಮಂದಿರದ ಪಾಲುದಾರ ಉಮೇಶ್ ಅವರು. ಪ್ರತಿ ಶೋಗೆ ಸ್ಯಾನಿಟೈಸ್ ಮಾಡಬೇಕು, ಒಂದು ಆಸನದಿಂದ ಮತ್ತೊಂದು ಆಸನದ ನಡುವೆ ಸಾಮಾಜಿಕ ಅಂತರ ಇರಬೇಕು. ಕೇವಲ ಆನ್‍ಲೈನ್ ಬುಕ್ಕಿಂಗ್‍ನಂತೆ ಟಿಕೆಟ್ ನೀಡುವುದು, ಆಗಮಿಸುವವರ ಉಷ್ಣಾಂಶ ಪರಿಶೀಲನೆ, ಇಂಟರ್ ವಲ್‍ನಲ್ಲೂ ಸ್ಯಾನಿಟೈಸ್ ಮಾಡು ವಂತಹ ನಿಯಮ ಪಾಲನೆಗೆ ಸೂಚನೆಯಿದೆ.