ಕುಶಾಲನಗರ, ಅ. 14: ಕಾಫಿ ತೋಟದಿಂದ ಕಳವು ಮಾಡಿ ಬೀಟೆ ಮರ ಸಾಗಿಸುತ್ತಿದ್ದ ಕಳ್ಳರ ತಂಡವೊಂದನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೀಟೆ ನಾಟಾಗಳು ಸೇರಿದಂತೆ ಒಂದು ಲಾರಿ, ಎರಡು ಕಾರುಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಕುಶಾಲನಗರ ಸಮೀಪದ ಕೊಡಗರಹಳ್ಳಿ ಬಳಿ ಬುಧವಾರ ಮುಂಜಾನೆ ಕಾರ್ಯಾಚರಣೆ ನಡೆದಿದ್ದು ಬೀಟೆ ಮರ ಸೇರಿದಂತೆ ಲಕ್ಷಾಂತರ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. 10 ಕ್ಕೂ ಅಧಿಕ ಆರೋಪಿಗಳು ಪರಾರಿಯಾ ಗಿದ್ದಾರೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೇರ ನೆಹರು ತಿಳಿಸಿದ್ದಾರೆ.ಕೊಡಗರಹಳ್ಳಿ ಬಳಿಯ ಸಿದ್ಧಮ್ಮ ಎಸ್ಟೇಟ್‍ನಲ್ಲಿ ಬಿದ್ದಿದ್ದ ಬೃಹತ್ ಗಾತ್ರದ ಬೀಟೆ ಮರವನ್ನು ಕಳ್ಳರ ತಂಡ ತುಂಡರಿಸಿ ನಾಟಾಗಳಾಗಿ ಪರಿವರ್ತಿಸಿ ಲಾರಿಗೆ ತುಂಬುತ್ತಿದ್ದ ಸಂದರ್ಭ ತೋಟದ ಮಾಲೀಕ ದೀಪಕ್ ಬಸವರಾಜ್ ಅವರ ಗಮನಕ್ಕೆ ಬಂದಿದೆ. ತಕ್ಷಣ ಸ್ಥಳಕ್ಕೆ ತೆರಳಿದ ಸಂದರ್ಭ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಒಂದು ಟಿಪ್ಪರ್ ಲಾರಿಯಲ್ಲಿ (ಕೆಎ.17.ಬಿ.8090) 6 ಬೀಟೆ ಮರ ನಾಟಾಗಳನ್ನು ತುಂಬಲಾಗಿದ್ದು ಸಮೀಪದಲ್ಲಿ ಎರಡು ಕಾರುಗಳು ಪತ್ತೆಯಾಗಿವೆ. ಅದರಲ್ಲಿ ಒಂದು ಹೊಸ ಟೊಯೊಟೊ ಕಾರು (ಕೆಎ.12.ಎಂಎ. 7577) ಮತ್ತು ಒಂದು ಮಾರುತಿ ಕಾರು (ಕೆಎ.03. ಎಂವೈ.3884) ಇದ್ದು ಸ್ಥಳದಲ್ಲಿ (ಮೊದಲ ಪುಟದಿಂದ) ಸೇರಿದ ಜನರು ಆಕ್ರೋಶದಿಂದ ವಾಹನಗಳಿಗೆ ಹಾನಿ ಮಾಡಿ ಲಾರಿ ಮತ್ತು ಇತರ ವಾಹನಗಳ ಟಯರ್ ಗಾಳಿ ತೆಗೆದಿದ್ದಾರೆ.ಮಾಹಿತಿ ದೊರೆತ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಡಿಎಫ್‍ಒ ಪ್ರಭಾಕರನ್, ಎಸಿಎಫ್ ನೆಹರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಉಪವಲಯ ಅರಣ್ಯಾಧಿಕಾರಿ ಮಹದೇವ್ ನಾಯಕ್ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸ್ಥಳದಲ್ಲಿದ್ದ ಬೀಟೆ ಮರ, ಲಾರಿ ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಂಡು ಮಹಜರು ನಡೆಸಿದಾಗ ಕುಶಾಲನಗರದ ತಾವರೆಕೆರೆ ಬಳಿಯಿರುವ ಮರದ ಮಿಲ್‍ನ ಅಬ್ದುಲ್ ಖಾದರ್ ಎಂಬವರ ಪುತ್ರ ಎಚ್.ಕೆ. ಸುಮೇರ್ ಎಂಬಾತನಿಗೆ ಸೇರಿದ ಕಾರು ಎಂಬದು ತಿಳಿದುಬಂದಿದೆ.

ಟಿಪ್ಪರ್ ಲಾರಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ ಸೇರಿದ್ದು ಕಳ್ಳತನದಲ್ಲಿ ತೊಡಗಿದ್ದ 10 ಕ್ಕೂ ಹೆಚ್ಚು ಆರೋಪಿಗಳು ಸ್ಥಳದಿಂದ ಪರಾರಿಯಾÁಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಅರಣ್ಯ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಟೊಯೊಟ ಕಾರು ಇತ್ತೀಚೆಗಷ್ಟೆ ಖರೀದಿ ಮಾಡಲಾಗಿದ್ದು ಕಾರಿನ ಮೌಲ್ಯ ಅಂದಾಜು 10 ಲಕ್ಷ ಸೇರಿದಂತೆ ಟಿಪ್ಪರ್ ಲಾರಿ, ಮಾರುತಿ ಕಾರು ಮತ್ತು ವಶಪಡಿಸಿಕೊಂಡ ಬೀಟೆ ಮರದ ಒಟ್ಟು ಮೌಲ್ಯ ರೂ. 25 ರಿಂದ 30 ಲಕ್ಷದ್ದಾಗಿದೆ. ಈ ಸಂಬಂಧ ತೋಟದ ಮಾಲೀಕರಾದ ದೀಪಕ್ ಬಸವರಾಜು ನೀಡಿದ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಡಿ.ಸಿ. ಗಣೇಶ್, ಸಿದ್ಧರಾಮ, ಕೆ.ಟಿ. ದಿನೇಶ್, ಚಾಲಕ ಎಂ.ಆರ್. ಚಂದ್ರ ಮತ್ತು ಆರ್‍ಆರ್‍ಟಿ ತಂಡದ ಸದಸ್ಯರು ಪಾಲ್ಗೊಂಡಿದ್ದರು.

ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.