ಸೋಮವಾರಪೇಟೆ, ಅ. 14: ಕಾವೇರಿ ತೀರ್ಥೋದ್ಭವದ ದಿನವಾದ ತಾ. 17 ರಂದು ಬೆಳಿಗ್ಗೆ 7 ಗಂಟೆಗೆ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗುವದು ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ತಾ. 17 ರಂದು ಸೋಮವಾರಪೇಟೆಯಲ್ಲಿ ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಿಸಲು ನಿರ್ಧರಿಸಲಾಗಿತ್ತು. ಆದರೆ ಜಿಲ್ಲಾಡಳಿತದ ಆದೇಶದ ಹಿನ್ನೆಲೆ ಅಂದು ತೀರ್ಥ ಸಂಗ್ರಹ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ತಾ. 17 ರಂದು ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ಸಂದರ್ಭದಲ್ಲಿ ಪಟ್ಟಣದ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಾಗುವದು ಎಂದರು.
ಅಂದು ಪೂರ್ವಾಹ್ನ 11 ಗಂಟೆಗೆ ಹರಪಳ್ಳಿ ರವೀಂದ್ರ ಅವರಿಂದ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ನಡೆಯಲಿದ್ದು, 11.30ಕ್ಕೆ ಪಟ್ಟಣದ ಜೇಸೀ ವೇದಿಕೆಯಲ್ಲಿ ಆಯ್ದ ನಿರ್ಗತಿಕ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುವದು ಎಂದು ತಿಳಿಸಿದರು. ಮಧ್ಯಾಹ್ನ 2 ಗಂಟೆಗೆ ಸಂಘದ ಪದಾಧಿಕಾರಿಗಳು ಸೋಮವಾರಪೇಟೆಯಿಂದ ತಲಕಾವೇರಿಗೆ ಪಾದಯಾತ್ರೆ ಮೂಲಕ ತೆರಳಿ ಕಾವೇರಿ ತೀರ್ಥ ಸಂಗ್ರಹಿಸಲಾಗುವದು. ತಾ. 19ರಂದು ಪಟ್ಟಣದ ಜೇಸೀ ವೇದಿಕೆಯಲ್ಲಿ ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಿಸಲಾಗುವದು ಎಂದು ನಾಗರಾಜ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಆನಂದ್, ಕಾರ್ಯದರ್ಶಿ ರಾಜಪ್ಪ, ಪದಾಧಿಕಾರಿಗಳಾದ ಪ್ರಸನ್ನ, ಅಜಯ್ ಅವರುಗಳು ಉಪಸ್ಥಿತರಿದ್ದರು.