ಸೋಮವಾರಪೇಟೆ, ಅ. 14: ಬೀಡಾಡಿ ಜಾನುವಾರುಗಳೊಂದಿಗೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಗೋವುಗಳನ್ನೂ ಸಹ ಖದೀಮರು ಕಳವು ಮಾಡುತ್ತಿರುವ ಘಟನೆ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಕೊಪ್ಪ, ಬೇಳೂರು ಬಸವನಹಳ್ಳಿಯಲ್ಲಿ ನಿರಂತರವಾಗಿ ನಡೆಯುತ್ತಿದೆ.
ಕಳೆದ ತಾ.8ರ ರಾತ್ರಿ ಕಾರೇಕೊಪ್ಪ, ಯಡವನಾಡು ವ್ಯಾಪ್ತಿಯಿಂದ ಪಿಕ್‍ಅಪ್ ವಾಹನದಲ್ಲಿ 6 ಗೋವುಗಳನ್ನು ಕಳವು ಮಾಡುತ್ತಿದ್ದ ಸಂದರ್ಭ ಸ್ಥಳೀಯರು ಯುವಕರು ಹಾಗೂ ಕುಶಾಲನಗರ ಪೊಲೀಸರು ಕಾರ್ಯಾಚರಣೆ ನಡೆಸಿದರೂ ಗೋ ಕಳ್ಳರು ತಪ್ಪಿಸಿಕೊಂಡಿದ್ದರು.
ಇದರ ತರುವಾಯವೂ ಸಹ ಈ ಭಾಗದಲ್ಲಿ ಗೋವುಗಳ ಕಳ್ಳತನ ನಡೆಯುತ್ತಲೇ ಇದ್ದು, ಸ್ಥಳೀಯರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೇಳೂರುಬಸವನಹಳ್ಳಿ ಗ್ರಾಮದ ಬಿ.ಎಂ. ಮಂಜುನಾಥ್ ಎಂಬವರಿಗೆ ಸೇರಿದ ಗಬ್ಬದ ಹಸುವನ್ನು ತಾ. 11ರ ರಾತ್ರಿ ಕಳವು ಮಾಡಲಾಗಿದೆ. ಮಂಜುನಾಥ್ ಅವರು ತಮ್ಮ ಮನೆಯಿಂದ ಅನತಿ ದೂರದಲ್ಲಿರುವ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿಹಾಕಿದ್ದರು. ಸಂಜೆ ಮೇವು ಹಾಕಿ ಮನೆಗೆ ವಾಪಸ್ ಬಂದಿದ್ದು, ರಾತ್ರಿ ವೇಳೆಯಲ್ಲಿ ಕಳ್ಳರು ಗೋವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಮಂಜುನಾಥ್, ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಂತೆಯೇ ಕಾರೇಕೊಪ್ಪ ಗ್ರಾಮದ ಶರತ್ ಎಂಬವರಿಗೆ ಸೇರಿದ 1 ಹಸು ಹಾಗೂ 2 ವರ್ಷದ ಕರುವನ್ನು ತಾ. 9ರಂದು ಕಳವು ಮಾಡಲಾಗಿದೆ. ಇದರೊಂದಿಗೆ ಮಧು ಎಂಬವರಿಗೆ ಸೇರಿದ 1 ಹಸು ಹಾಗೂ ಕರು, ರಮೇಶ್ ಎಂಬವರಿಗೆ ಸೇರಿದ 2 ಎತ್ತುಗಳನ್ನು ಕೊಟ್ಟಿಗೆಯಿಂದಲೇ ಕಳವು ಮಾಡಲಾಗಿದೆ.
ನಡುರಾತ್ರಿ ವೇಳೆಯಲ್ಲಿ ಪಿಕ್‍ಅಪ್ ಸೇರಿದಂತೆ ಕಾರಿನಲ್ಲಿ ಬರುವ ಖದೀಮರು, ಕೊಟ್ಟಿಗೆಗಳಿಂದ ಗೋವುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಪೊಲೀಸ್ ಇಲಾಖೆ ರಾತ್ರಿ ವೇಳೆಯಲ್ಲಿ ಹೆಚ್ಚಿನ ಗಸ್ತು ನಡೆಸಬೇಕಿದೆ ಎಂದು ಸ್ಥಳೀಯರಾದ ನವೀನ್ ಕರ್ಣ ಆಗ್ರಹಿಸಿದ್ದಾರೆ.