ಮಡಿಕೇರಿ, ಅ. 14: ಕೊರೊನಾ ವೈರಸ್ ಭೀತಿಯ ನಡುವೆ ಈ ಬಾರಿ ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವನ್ನು ಸಾಂಪ್ರದಾಯಿಕ ವಾಗಿ ಹಲವಾರು ನಿರ್ಬಂಧ ಗಳೊಂದಿಗೆ ಆಚರಿಸಲಾಗುತ್ತಿದ್ದು, ನಾಡಿನ ಜನತೆ ಉತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡದೆ; ಉತ್ಸವದಲ್ಲಿ ಪಾಲ್ಗೊಳ್ಳದೆ ನಮ್ಮೊಂದಿಗೆ ಸಹಕರಿಸುವಂತೆ ಮಡಿಕೇರಿ ನಗರ ದಸರಾ ಸಮಿತಿ ಮನವಿ ಮಾಡಿದೆ.ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಮಡಿಕೇರಿ ದಸರಾವನ್ನು ಸಾಂಪ್ರ ದಾಯಿಕ ಆಚರಣೆಗೆ ಸೀಮಿತಗೊಳಿಸಿ ಈಗಾಗಲೇ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಉತ್ಸವ ಸಮಿತಿಗಳು ತೀರ್ಮಾನ ತೆಗೆದುಕೊಂಡಿವೆ. ಅದರಂತೆ ಕರಗ ಉತ್ಸವ ಹಾಗೂ ಕಲಶ ಮೆರವಣಿಗೆಯನ್ನು ನಿರ್ದಿಷ್ಟ ಜನರ ಉಪಸ್ಥಿತಿಯಲ್ಲಿ ನಡೆ¸ Àಬೇಕಾಗಿದ್ದು, ಹೆಚ್ಚಿನ ಜನರು ಪಾಲ್ಗೊಳ್ಳುವಂತಿಲ್ಲ. ಸಮಿತಿಗಳ ಸೀಮಿತ ಜನರು ಕೊರೊನಾ ಪರೀಕ್ಷೆಗೆ ಒಳಪಟ್ಟು ಉತ್ಸವ ನಡೆಸಬೇಕಾಗಿದ್ದು, ಸಮಿತಿಯಿಂದ ಉತ್ಸವದಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ, ವ್ರತಧಾರಿಗಳಿಗೆ, ವಾದ್ಯದವರಿಗೆ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ತಾ. 17 ರಂದು ಸಂಜೆ 5 ಗಂಟೆಗೆ ಪಂಪಿನಕೆರೆಯಲ್ಲಿ ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಿ ಕರಗಗಳಿಗೆ ಪೂಜೆ ನೆರವೇರಲಿದೆ. ಗಣ್ಯರು ಸೇರಿದಂತೆ ಅಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಟ್ಟಿರುತ್ತಾರೆ.
(ಮೊದಲ ಪುಟದಿಂದ) ಪೂಜೆಯ ಬಳಿಕ 15 ನಿಮಿಷಕ್ಕೆ ಒಂದರಂತೆ ಕರಗಗಳನ್ನು ಹೊರಡಿಸಲಾಗುವದು. ರಸ್ತೆಯಲ್ಲಿ ಪೂಜೆ ಸಲ್ಲಿಸಲು ಅವಕಾಶವಿಲ್ಲ ಎಂದು ರಾಬಿನ್ ದೇವಯ್ಯ ತಿಳಿಸಿದರು. 9 ದಿನಗಳ ಕಾಲ ದೇವಾಲಯಗಳಲ್ಲಿ ಕರಗಗಳಿಗೆ ಪೂಜೆ ಸಲ್ಲಿಸಬಹುದಾಗಿದ್ದು, ಕೊರೊನಾ ನಿಯಮ ಪಾಲನೆ ಮಾಡಬೇಕಿದೆ ಎಂದರು. ತಾ. 26ರ ವಿಜಯದಶಮಿಯಂದು ಕರಗ ಹಾಗೂ ಹತ್ತು ದೇವಾಲಯಗಳಲ್ಲಿ ಪೂಜಿಸಲ್ಪಟ್ಟ ಕಲಶ ಮೆರವಣಿಗೆ ಕೂಡ ಸೀಮಿತ ಜನರ ಹಾಜರಿಯಲ್ಲಿ ನಡೆಯಲಿದೆ. ಪಿಕಪ್ ವಾಹನದಲ್ಲಿ ಕಲಶ ಹಾಗೂ ದೇವಿ ಮೂರ್ತಿಯೊಂದಿಗೆ ದಶಮಂಟಪಗಳು ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯಲಿವೆ ಎಂದು ತಿಳಿಸಿದ ರಾಬಿನ್ ಈ ಎಲ್ಲಾ ಧಾರ್ಮಿಕ ಕಾರ್ಯಗಳ ಸಂದರ್ಭ ಜನತೆ ಹೆಚ್ಚಾಗಿ ಪಾಲ್ಗೊಳ್ಳದೆ ಮನೆಯಿಂದಲೇ ದೇವರಿಗೆ ನಮಿಸಿ ಕೊರೊನಾ ನಿಯಮ ಪಾಲಿಸಿ ಸಹಕರಿಸುವಂತೆ ಕೋರಿದರು.
ದಸರಾ ಸಮಿತಿ ಪೋಷಕ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಮಾತನಾಡಿ, ಮೈಸೂರು ದಸರಾವನ್ನು ಮೀರಿಸುವ ರೀತಿಯಲ್ಲಿ ನಡೆಯುತ್ತಿದ್ದ ಮಡಿಕೇರಿ ದಸರಾವನ್ನು ಕೊರೊನಾ ಹಿನ್ನೆಲೆಯಲ್ಲಿ ಸಂಪ್ರದಾಯ ಬದ್ಧವಾಗಿ ಮಾತ್ರ ಆಚರಿಸಬೇಕಾದ ಅನಿವಾರ್ಯತೆ ಇದ್ದು, ಜನತೆ ಹೆಚ್ಚಾಗಿ ಪಾಲ್ಗೊಳ್ಳದೆ ಮನೆ ಮನಗಳಲ್ಲಿ ದೇವರನ್ನು ಸ್ಮರಿಸುವ ಮೂಲಕ ಸಹಕರಿಸಬೇಕೆಂದು ವಿನಂತಿ ಮಾಡಿದರು. ಕೊರೊನಾವನ್ನು ನಿರ್ಲಕ್ಷಿಸದೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಜನರು ಸಹಕಾರ ನೀಡಬೇಕೆಂದರು.
ಗೋಷ್ಠಿಯಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಉಪಾಧ್ಯಕ್ಷರುಗಳಾದ ಜೀವನ್, ರಾಕೇಶ್, ಖಜಾಂಚಿ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.