ಮಡಿಕೇರಿ, ಅ. 14: ಮಡಿಕೇರಿ ಐತಿಹಾಸಿಕ ದಸರಾ ಹಾಗೂ ತಲಕಾವೇರಿ ಯಲ್ಲಿ ಪವಿತ್ರ ತೀರ್ಥೋದ್ಭವ ಹಿನ್ನೆಲೆ ಜನಸಂದಣಿಯಾಗದಂತೆ ಕೊರೊನಾ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕಟ್ಟುನಿಟ್ಟಿನ ನಿರ್ಬಂಧ ಗಳನ್ನು ಜಾರಿಗೊಳಿಸಿದ್ದಾರೆ. ಐಪಿಸಿ ಸೆಕ್ಷನ್ 188ರ ಅನ್ವಯ ಈ ಆದೇಶ ಜಾರಿಯಾಗಿದ್ದು, ಇದರ ಉಲ್ಲಂಘನೆಯು ದಂಡ ನೀಯವಾಗಿದೆ ಎಂದು ಆದೇಶದಲ್ಲಿ ಖಚಿತಪಡಿಸಲಾಗಿದೆ.ಮುಖ್ಯವಾಗಿ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್ -19 ರೆಗ್ಯುಲೇಶನ್ 2020ರ ನಿಯಮದಂತೆ ಈ ಆದೇಶವನ್ನು ಜಾರಿಗೊಳಿಸಿರುವದಾಗಿ ಆದೇಶದಲ್ಲಿ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ. ಇದರೊಂದಿಗೆ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆ್ಯಕ್ಟ್ -2005ರ ದಂಡ ಪ್ರಕ್ರಿಯಾ ಸಂಹಿತೆಯನ್ವಯ ಹಾಗೂ ಮೋಟಾರು ವಾಹನಗಳ ನಿಯಮ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ವಿಧಿ 31ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರದಂತೆ ಈ ಆದೇಶಗಳನ್ನು ಜಾರಿಗೊಳಿಸಿರುವದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ದಸರಾ - ನಿರ್ಬಂಧಗಳು ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಕಾರ್ಯಕ್ರಮದಲ್ಲಿ ಸರಳ ಸಾಂಪ್ರದಾಯಿಕ, ಧಾರ್ಮಿಕ ಆಚರಣೆಯನ್ನು ಹೊರತುಪಡಿಸಿ ಯಾವುದೇ ಸಾಂಸ್ಕøತಿಕ ಕಾರ್ಯ ಕ್ರಮಗಳಿಗೆ ಮತ್ತು ಜನಸಂದಣಿ ಸೇರುವಂತಹ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ.
ತಾ. 17 ಮತ್ತು 26 ರಂದು ರಾತ್ರಿ 10 ಗಂಟೆಯೊಳಗೆ ದಸರಾ ಸಂಬಂಧಿತ ಧಾರ್ಮಿಕ ವಿಧಿ ವಿಧಾನಗಳನ್ನು ಮುಗಿಸಬೇಕು. ತದನಂತರ ಯಾವುದೇ ಆಚರಣೆಗೆ ಅವಕಾಶ ಇರುವುದಿಲ್ಲ. ಹೆಚ್ಚುವರಿಯಾಗಿ ಯಾವುದೇ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲು ಅವಕಾಶ ಇರುವುದಿಲ್ಲ. ಸಂಬಂಧಪಟ್ಟ ನಗರಸಭೆ ಮತ್ತು ಗ್ರಾಮ ಪಂಚಾಯತಿಯು ಪ್ರಸ್ತುತ ಇರುವ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಾಗುವುದು. ಸಾಂಪ್ರದಾಯಿಕ ಸರಳ ದಸರಾ ಆಚರಣೆಯನ್ನು ಸಾರ್ವಜನಿಕವಾಗಿ ಗುಂಪುಗುಂಪಾಗಿ ವೀಕ್ಷಿಸಲು ಅವಕಾಶವಿಲ್ಲ.
ಮಡಿಕೇರಿ ನಗರ ಮತ್ತು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ತಾ. 26 ರಂದು ಬಂದ್ ಮಾಡಲಾಗುವುದು. ಕರಗ - ಕಲಶವನ್ನು ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ವೀಕ್ಷಿಸಲು ಅಥವಾ ರಸ್ತೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ಇರುವುದಿಲ್ಲ. ದಸರಾ ಸಮಿತಿಗಳಲ್ಲಿ, ಸಮಿತಿ ಮತ್ತು ಪೊಲೀಸ್ ಇಲಾಖೆಯಿಂದ ನಿಗದಿಪಡಿಸಿರುವಷ್ಟು ಸಂಖ್ಯೆಯಲ್ಲಿ ಮಾತ್ರ ಸದಸ್ಯರಿರತಕ್ಕದ್ದು.
ಈ ಸದಸ್ಯರು 48 ಗಂಟೆಗಳ ಮುಂಚೆ ಆರ್.ಟಿ.ಪಿ.ಸಿ.ಆರ್ ಕೋವಿಡ್ ಪರೀಕ್ಷೆಗೆ ಒಳಗಾಗಿರತಕ್ಕದ್ದು ಮತ್ತು ನೆಗೆಟಿವ್ ವರದಿ ಇರುವ ದೃಢೀಕರಣವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಸಮಿತಿಗಳಲ್ಲಿನ ಎಲ್ಲಾ ಸದಸ್ಯರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು
(ಮೊದಲ ಪುಟದಿಂದ) ಕಾಪಾಡುವುದು ಕಡ್ಡಾಯವಾಗಿದ್ದು, ಇದರ ಪಾಲನೆಯು ದಸರಾ ಸಮಿತಿಯ ಜವಾಬ್ದಾರಿಯಾಗಿರುತ್ತದೆ.
ಯಾವುದೇ ಮೆರವಣಿಗೆಗೆ ಅವಕಾಶ ಇರುವುದಿಲ್ಲ. ತಾ. 26 ರಂದು ನಡೆಯುವ ಧಾರ್ಮಿಕ ವಿಧಿ ವಿಧಾನಗಳಿಗೆ ಪೊಲೀಸ್ ಇಲಾಖೆಯಿಂದ ಅನುಮತಿ ನೀಡಿದಂತೆ ನಿಗದಿಪಡಿಸಿದ ವಾಹನವನ್ನು ಮಾತ್ರ ಬಳಸುವುದು. ಹೊಸದಾಗಿ ಯಾವುದೇ ಅಂಗಡಿಗಳಿಗೆ ಅವಕಾಶವಿಲ್ಲ ಮತ್ತು ಹೊಸದಾಗಿ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ.
ದಸರಾ ಸಮಿತಿಯು ಕೇಂದ್ರ, ರಾಜ್ಯ ಸರ್ಕಾರದಿಂದ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಲ್ಲಿ ಜವಾಬ್ದಾರಿ ಹೊಂದಿರುತ್ತದೆ ಯಾವುದೇ ತಪ್ಪುಗಳಿಗೆ ಸಮಿತಿಯವರೇ ಹೊಣೆಗಾರರಾಗಿರುತ್ತಾರೆ. ಜನಸಂದಣಿ ಸೇರುವಂತಹ ಯಾವುದೇ ಚಟುವಟಿಕೆಗಳನ್ನು ದಸರಾ ಸಮಿತಿಯು ನಡೆಸುವಂತಿಲ್ಲ. ಕಡ್ಡಾಯವಾಗಿ ಸರ್ಕಾರದ ಕೋವಿಡ್-19 ಕಾರ್ಯವಿಧಾನವನ್ನು ಪಾಲಿಸಬೇಕು.
ತೀರ್ಥೋದ್ಭವ - ನಿಯಮ ಪಾಲನೆ ಕಡ್ಡಾಯ
ತಲಕಾವೇರಿಯಲ್ಲಿ ತುಲಾಸಂಕ್ರಮಣವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ ಸೋಂಕಿನಿಂದಾಗಿ ತುಲಾಸಂಕ್ರಮಣವನ್ನು ಸರಳವಾಗಿ ಆಚರಣೆ ಮಾಡಬೇಕಾಗಿದೆ. ಆದ್ದರಿಂದ ತಲಕಾವೇರಿಯಲ್ಲಿ ತಾ. 16ರ ಮಧ್ಯರಾತ್ರಿ 12 ಗಂಟೆಯಿಂದ ತಾ. 17ರ ಮಧ್ಯರಾತ್ರಿ 12 ಗಂಟೆವರೆಗೆ ಜಾರಿಯಲ್ಲಿರುವಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ತಾ. 17 ರಂದು ಬೆಳಗ್ಗೆ 7.03 ನಿಮಿಷಕ್ಕೆ ನಡೆಯುವ ತೀರ್ಥೋದ್ಭವದಲ್ಲಿ ಜನ ಸಂದಣಿ ಸೇರಲು ಅವಕಾಶ ಇರುವುದಿಲ್ಲ. ತಲಕಾವೇರಿಯಲ್ಲಿ ತೀರ್ಥೋದ್ಭವ ಸಂದರ್ಭದಲ್ಲಿ ಇರಬೇಕಾದ ಸದಸ್ಯರುಗಳು 48 ಗಂಟೆಗಳ ಮುಂಚೆ ಆರ್.ಟಿ.ಸಿ.ಪಿ.ಆರ್ ಕೋವಿಡ್ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಇರುವ ದೃಢೀಕರಣವನ್ನು ಇಟ್ಟುಕೊಳ್ಳತಕ್ಕದ್ದು ಮತ್ತು ಎಲ್ಲಾ ಸದಸ್ಯರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದ್ದು, ಇದರ ಪಾಲನೆಯು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಜವಾಬ್ದಾರಿಯಾಗಿದೆ. ಅನ್ನದಾನ ನಡೆಸಲು ಅವಕಾಶ ಇರುವುದಿಲ್ಲ. ದೇವಸ್ಥಾನ ಅಥವಾ ದೇವಸ್ಥಾನ ಛತ್ರಗಳಲ್ಲಿ ತೀಥೋದ್ಭವ ಹಿಂದಿನ ದಿನದ ರಾತ್ರಿ ಉಳಿದುಕೊಳ್ಳಲು ಅವಕಾಶ ಇರುವುದಿಲ್ಲ. ತಾ. 17 ರಂದು ಬೆಳಗ್ಗೆ 6 ಗಂಟೆಯ ನಂತರ ಮಾತ್ರ ಭಾಗಮಂಡಲದಿಂದ ತಲಕಾವೇರಿಗೆ ವಾಹನ ಸಂಚಾರಕ್ಕೆ ಅವಕಾಶ ಇರುತ್ತದೆ.
ಹೆಚ್ಚುವರಿಯಾಗಿ ಯಾವುದೇ ಬೆಳಕಿನ ವ್ಯವಸ್ಥೆ ಹಾಗೂ ಧ್ವನಿವರ್ಧಕ ವ್ಯವಸ್ಥೆ ಮಾಡಲು ಅವಕಾಶ ಇರುವುದಿಲ್ಲ. ಸಂಬಂಧಪಟ್ಟ ಗ್ರಾಮ ಪಂಚಾಯತಿಯು ಪ್ರಸ್ತುತ ಇರುವ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಿದೆ. ಹೊಸದಾಗಿ ಯಾವುದೇ ಅಂಗಡಿಗಳಿಗೆ ಅವಕಾಶವಿಲ್ಲ ಮತ್ತು ಹೊಸದಾಗಿ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ. ಈ ಕಾರ್ಯಕ್ರಮಕ್ಕೆ ಯಾವುದೇ ಪಾಸ್‍ಗಳನ್ನು ವಿತರಿಸಲಾಗುವುದಿಲ್ಲ.
ಗುಂಪು ಗುಂಪಾಗಿ ಸೇರಿ ಹೋಗಲು ಅವಕಾಶ ಇರುವುದಿಲ್ಲ. ಗುಂಪು ಗುಂಪಾಗಿ ಜನರನ್ನು ದೊಡ್ಡ ವಾಹನಗಳಲ್ಲಿ ಕರೆತರಲು ಅವಕಾಶ ಇರುವುದಿಲ್ಲ. ಕಡ್ಡಾಯವಾಗಿ ಸರ್ಕಾರದ ಕೋವಿಡ್-19 ಕಾರ್ಯವಿಧಾನವನ್ನು ಪಾಲಿಸತಕ್ಕದ್ದು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಅವರು ಎಲ್ಲ ಆಗುಹೋಗುಗಳಿಗೆ ಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.