ಕುಶಾಲನಗರ, ಅ. 14: ಡಾ. ಕೆ. ಅಜಯ್ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಭುದೇವ ಎಂ.ಜಿ. ಅವರು ರಸಾಯನ ಶಾಸ್ತ್ರ ವಿಷಯದಲ್ಲಿ ಸಾದರ ಪಡಿಸಿದ “ಥಯೋಪಿನ್ ರಾಸಾಯನಿಕ ಅನಾವರ್ತಿತ ಸಂಯುಕ್ತಗಳ ಸಂಶ್ಲೇಷಣೆ, ಗುಣ ಲಕ್ಷಣಗಳು ಹಾಗೂ ಜೈವಿಕ ಪರಿಣಾಮಗಳ ಅಧ್ಯಯನ” ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವ ವಿದ್ಯಾನಿಲಯವು ಪಿ.ಎಚ್.ಡಿ. ಪದವಿಗೆ ಅಂಗೀಕರಿಸಿದೆ.
ಮೂಲತಃ ಹಾಸನ ಜಿಲ್ಲೆಯವರಾದ ಇವರು ಕುಶಾಲನಗರದ ವಿವೇಕಾನಂದ ಎಜುಕೇಶನ್ ಟ್ರಷ್ಟ್ನ ಸಂಪಾದಕ ಕಾರ್ಯದರ್ಶಿಯಾಗಿ ವಿವೇಕಾನಂದ ಪಿ.ಯು. ಕಾಲೇಜು ಮತ್ತು ಎಂ.ಜಿ.ಎಂ. ಪ್ರಥಮ ದರ್ಜೆ ಕಾಲೇಜುಗಳ ಪ್ರಾಚಾರ್ಯರಾಗಿ ಹಾಗೂ ವೀರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಏಕಲವ್ಯ ವಸತಿ ಪಿ.ಯು. ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಮೈಸೂರಿನ ಮಹಾಜನ ಪಿ.ಯು. ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.