ವೀರಾಜಪೇಟೆ, ಅ. 14: ವೀರಾಜಪೇಟೆಗೆ ಇಂದು ಲೋಕಾಯುಕ್ತ ತಂಡದ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಸಾರ್ವಜನಿಕರಿಂದ ಅರ್ಜಿ ಅಹವಾಲುಗಳನ್ನು ಸ್ವೀಕರಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು 7 ದೂರುಗಳನ್ನು ಸ್ವೀಕರಿಸಿದ್ದು, ಈ ಪೈಕಿ ಕಂದಾಯ ಇಲಾಖೆಗೆ ಸಂಬಂಧಿಸಿದ 4 ದೂರಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿ ಬಗೆಹರಿಸಿದರು. ಈ ಸಂದರ್ಭ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಲೋಕಾಯುಕ್ತ ಅಧಿಕಾರಿ ಸುಬ್ರಮಣಿ, ಕೋವಿಡ್‍ನಿಂದಾಗಿ ಲೋಕಾಯುಕ್ತದ ತಂಡದ ತಾಲೂಕು ಭೇಟಿ ವಿಳಂಬವಾಯಿತು. ಮುಂದಿನ ತಿಂಗಳಿಂದ ಪ್ರತಿ ತಿಂಗಳು ತಾಲೂಕಿಗೆ ಭೇಟಿ ನೀಡಿ ಸಾರ್ವಜನಿಕ ಅಹವಾಲು, ಸಮಸ್ಯೆಗಳ ಅರ್ಜಿಗಳಿಗೆ ಸ್ಪಂದಿಸಲಿದೆ. ಈಗ ಅಧಿಕವಾಗಿ ಕಂದಾಯ ಇಲಾಖೆಗಳ ಮೇಲೆ ಪೌತಿಖಾತೆ, ಜಮಾಬಂದಿ ವರ್ಗಾವಣೆಯಲ್ಲಿ ವಿಳಂಬ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ನೀತಿ ತಾಳುತ್ತಿರುವ ದೂರುಗಳು ಬರುತ್ತಿದೆ. ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳು ಲೋಕಾಯುಕ್ತಕ್ಕೆ ದೂರು ಬರುವ ಮೊದಲೇ ಈ ಸಮಸ್ಯೆಗಳಿಗೆ ಸ್ಪಂದಿಸುವುದು ಒಳಿತು. ತಾಲೂಕಿನ ವಿವಿಧಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯ ವೈಖರಿ, ನಿರ್ಲಕ್ಷ್ಯತೆಗೆ, ಅರ್ಜಿ ವಿಲೇವಾರಿಯಲ್ಲಿ ವಿಳಂಬಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಬಹುದು ಎಂದರು.

ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್, ವೀರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೆಗೌಡ, ಲೋಕಾಯುಕ್ತದ ಸಿಬ್ಬಂದಿಗಳು ಉಪಸ್ಥಿತರಿದ್ದರು.