ಸೋಮವಾರಪೇಟೆ, ಅ. 14: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಮುಖ 6 ಪ್ರದೇಶದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಠಾಣೆಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಡಿವೈಎಸ್‍ಪಿ ಶೈಲೇಂದ್ರ ಹೇಳಿದರು.

ಇಲ್ಲಿನ ಸಾಕ್ಷಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಠಾಣಾಧಿಕಾರಿ ಶಿವಶಂಕರ್ ಅವರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೋಮವಾರ ಪೇಟೆಯಲ್ಲಿ ಠಾಣಾಧಿಕಾರಿಯಾಗಿದ್ದ ಶಿವಶಂಕರ್ ಅವರ ಪ್ರಯತ್ನದ ಫಲವಾಗಿ ಈವರೆಗೆ 2 ಕಡೆಗಳಲ್ಲಿ ಸುಸಜ್ಜಿತ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.

ಶಿವಶಂಕರ್ ಅವರು ಸ್ವ ಆಸಕ್ತಿಯಿಂದ ಇಲಾಖೆ ಹಾಗೂ ಸಮಾಜದ ಪ್ರಮುಖರ ಸಹಕಾರ ದೊಂದಿಗೆ ಈಗಾಗಲೇ ಹೊಸತೋಟ ಮತ್ತು ಐಗೂರಿನಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿದ್ದಾರೆ. ಇಂತಹ ಸಮಯ ದಲ್ಲೇ ಅವರಿಗೆ ವರ್ಗಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಇತರ 4 ಕಡೆಗಳಲ್ಲೂ ಉತ್ತಮ ದರ್ಜೆಯ ಸಿ.ಸಿ. ಕ್ಯಾಮೆರಾ ಗಳನ್ನು ಅಳವಡಿಸ ಲಾಗುವದು ಎಂದು ತಿಳಿಸಿದರು.

ಇಲಾಖೆಯಲ್ಲಿ ವರ್ಗಾವಣೆಗಳು ಸಾಮಾನ್ಯವಾಗಿದ್ದು, ಎಲ್ಲೆಡೆಯೂ ಕಾನೂನು ಪಾಲನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ. ಸೋಮವಾರಪೇಟೆ ಯಲ್ಲಿ ಶಿವಶಂಕರ್ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೀಳ್ಕೊಡುಗೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಠಾಣಾಧಿಕಾರಿಗಳು, ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಈವರೆಗೆ 15 ಮಂದಿ ಸಾವನ್ನಪ್ಪಿದ್ದು, ಇಲ್ಲಿನ ದುರಂತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂದಿನ ಎಸ್.ಪಿ. ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಜಲಪಾತದ ತಳಭಾಗದಲ್ಲಿ ಫೆನ್ಸಿಂಗ್ ನಿರ್ಮಿಸುವ ಮೂಲಕ ಆಕಸ್ಮಿಕ ಸಾವುಗಳಿಗೆ ತಡೆಯೊಡ್ಡಿರುವದಾಗಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕುಶಾಲನಗರದ ವೃತ್ತ ನಿರೀಕ್ಷಕ ಮಹೇಶ್, ಸೋಮವಾರಪೇಟೆಯ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಮಡಿಕೇರಿಯ ವೃತ್ತ ನಿರೀಕ್ಷಕರುಗಳಾದ ಮೇದಪ್ಪ, ದಿವಾಕರ್, ಸೋಮವಾರಪೇಟೆ ಠಾಣಾಧಿಕಾರಿ ವಿರೂಪಾಕ್ಷ ಅವರುಗಳು ಉಪಸ್ಥಿತರಿದ್ದರು.

ಇಲಾಖೆಯ ಎಎಸ್‍ಐ ಸುಂದರ್ ಸುವರ್ಣ, ಜಗದೀಶ್, ಮಧು, ಜಗದೀಶ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ನಿರ್ಗಮಿತ ಠಾಣಾಧಿಕಾರಿಯನ್ನು ಸನ್ಮಾನಿಸಿ, ಚಿನ್ನದ ಉಂಗುರ ನೀಡಿ ಬೀಳ್ಕೊಡಲಾಯಿತು.