ಕಣಿವೆ, ಅ. 14: ಕಾಡು ಗಿಡಗಳಿಂದ ಆವೃತವಾಗಿದ್ದ ಕುಶಾಲನಗರದ ನೇತಾಜಿ ಬಡಾವಣೆಯ ಉದ್ಯಾನವನವನ್ನು ಪಂಚಾಯಿತಿಯ ಸ್ವಚ್ಛತಾ ಸೇನಾನಿಗಳು ಬುಧವಾರ ಬೆಳಗ್ಗೆ ಸ್ವಚ್ಛಗೊಳಿಸಿದ್ದಾರೆ. ‘ಶಕ್ತಿ’ಯಲ್ಲಿ ಪ್ರಕಟವಾಗಿದ್ದ ‘ಊರಿನ ವನವಾಗಿರುವ ಉದ್ಯಾನವನ’ ಎಂಬ ವರದಿಗೆ ಎಚ್ಚೆತ್ತು ಕೂಡಲೇ ಸ್ಪಂದಿಸಿರುವ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್, ಬುಧವಾರ ಬೆಳಿಗ್ಗೆ ನೇತಾಜಿ ಬಡಾವಣೆಗೆ ತೆರಳಿ ಉದ್ಯಾನವನ ವನ್ನು ಪರಿವೀಕ್ಷಣೆ ಮಾಡಿ ಖುದ್ದು ನಿಂತು ಪೌರ ಕಾರ್ಮಿಕರ ಮೂಲಕ ಉದ್ಯಾನವನವನ್ನು ಸಾರ್ವಜನಿಕರು ಬಳಸುವಷ್ಟರ ಮಟ್ಟಿಗೆ ಅನುವುಗೊಳಿಸಿದ್ದಾರೆ.

ಉದ್ಯಾನವನದೊಳಗೆ ಬೆಳೆದು ನಿಂತಿದ್ದ ಕಾಡು ಬಳ್ಳಿಗಳನ್ನು ತೆರವು ಗೊಳಿಸಿದ್ದರಿಂದ ಇಲ್ಲಿನ ಸಾರ್ವಜನಿಕರು ‘ಶಕ್ತಿ’ ಪತ್ರಿಕೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಾವು ಬಹಳಷ್ಟು ಬಾರಿ ಪಂಚಾಯತಿ ಗಮನಕ್ಕೆ ತಂದಿದ್ದರೂ ಕೂಡ ಉದ್ಯಾನವನ ಸ್ವಚ್ಛ ವಾಗಿರಲಿಲ್ಲ. ಈಗ ನಮ್ಮ ಮಕ್ಕಳು ನಿಶ್ಚಿಂತೆಯಿಂದ ಆಟ ಆಡುವಷ್ಟು, ಮತ್ತು ಮಹಿಳೆಯರು ನಿರ್ಭಯವಾಗಿ ವಿಹರಿಸುವಷ್ಟು ಸ್ವಚ್ಛವಾಗಿದೆ ಎಂದು ಅಲ್ಲಿನ ನಿವಾಸಿಯೂ ಆದ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ತಿಳಿಸಿದ್ದಾರೆ.

ಕೊರೊನಾ ಕಾರಣ ನಮ್ಮ ಸಿಬ್ಬಂದಿಗಳು ನಗರದ ವಿವಿಧ ವಾರ್ಡ್‍ಗಳ ಬೀದಿಗಳು ಹಾಗೂ ಚರಂಡಿಗಳ ಸ್ವಚ್ಛತೆಯಲ್ಲಿ ತಲ್ಲೀನರಾಗುತ್ತಿದ್ದಾರೆ. ಬಡಾವಣೆಗಳ ಉದ್ಯಾನವನಗಳ ಅಭಿವೃದ್ದಿಯ ಬಗ್ಗೆ ಪಂಚಾಯಿತಿಗೆ ಕಾಳಜಿ ಇದೆ. ಆದರೆ ಹಲವು ತಾಂತ್ರಿಕ ಕಾರಣಗಳಿಂದ ಮತ್ತು ಸಿಬ್ಬಂದಿ ಕೊರತೆಯಿಂದ ಗಮನವಹಿಸಲು ವಿಳಂಬವಾಗುತ್ತಿದೆ ಅಷ್ಟೆ. ಸಾರ್ವಜನಿಕರು ಕೂಡ ಪಂಚಾಯಿತಿಯ ಆಸ್ತಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪಂಚಾಯಿತಿ ಜೊತೆ ಕೈಜೋಡಿಸಬೇಕಿದೆ. ಅಲ್ಲದೇ ಪಟ್ಟಣದ ಕೆಲವು ಸಂಘಟನೆಗಳು ಅಥವಾ ಉದ್ಯಮಿಗಳು ಮುಂದೆ ಬಂದು ಇಂತಹ ಉದ್ಯಾನವನಗಳ ನಿರ್ವಹಣೆಗೆ ಆಸಕ್ತಿ ತೋರಬೇಕಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಕೋರಿದ್ದಾರೆ.

- ಮೂರ್ತಿ