ಸೋಮವಾರಪೇಟೆ, ಅ. 15: ಸಮೀಪದ ಕಿರಗಂದೂರು ಗ್ರಾಮದ ಬಾಗಿಲು ಕಂಡಿ ನಂದಿ ಸಂಸ್ಥೆ ಅಂಗಳದಲ್ಲಿ ಕಾಫಿ ಬೋರರ್ ನಿಯಂತ್ರಣಕ್ಕೆ ಬೆಳೆಗಾರರು ತೆಗೆದು ಕೊಳ್ಳಬಹುದಾದ ಮುಂಜಾಗ್ರತಾ ಕ್ರಮ ಹಾಗೂ ಕಾಫಿ ಮಂಡಳಿಯ ಇತರ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಕಾರ್ಯಾಗಾರ ನಡೆಯಿತು.

ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಎಚ್.ಆರ್. ಮುರುಳೀಧರ್ ಅವರು, ಕಾಫಿ ಬೋರರ್ ನಿಯಂತ್ರಣಕ್ಕೆ ಬೆಳೆಗಾರರು ತೆಗೆದುಕೊಳ್ಳಬೇಕಾದ ಕ್ರಮಗಳು, ಕೀಟಬಾಧೆ ನಿಯಂತ್ರಣದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಅರೇಬಿಕಾ ಕಾಫಿಯನ್ನು ಪೀಡಿಸುವ ಅತೀ ಭಯಂಕರ ಕೀಟವಾಗಿರುವ ಬಿಳಿಕಾಂಡಕೊರಕ ಕೀಟ ನಿಯಂತ್ರಣಕ್ಕೆ ಏಪ್ರಿಲ್-ಮೇ ಮತ್ತು ಅಕ್ಟೋಬರ್-ಡಿಸೆಂಬರ್‍ನಲ್ಲಿ ಕೀಟನಾಶಕವನ್ನು ಸಿಂಪಡಿಸಬೇಕು. ರೋಗಪೀಡಿತ ಗಿಡಗಳನ್ನು ಬುಡಸಹಿತ ಕಿತ್ತು ಸುಟ್ಟು ಹಾಕಬೇಕು. ಈ ಕೆಲಸವನ್ನು ಎಲ್ಲಾ ಬೆಳೆಗಾರರು ಸಾಮೂಹಿಕವಾಗಿ ನಿಗದಿತ ಸಮಯದಲ್ಲಿ ಮಾಡಿದರೆ ಮಾತ್ರ ರೋಗಬಾಧೆ ಹತೋಟಿ ಸಾಧ್ಯ. ಇದರೊಂದಿಗೆ ಮೋಹಕ ಬಲೆ ತಂತ್ರಜ್ಞಾನದ ಮೂಲಕವೂ ಕೀಟ ನಿಯಂತ್ರಣ ಮಾಡಬಹುದಾಗಿದೆ ಎಂದರು. ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕೀಟ ಪೀಡಿತ ಗಿಡಗಳನ್ನು ತೆಗೆಯಬೇಕು. ಏಪ್ರಿಲ್ ನಿಂದ ಜೂನ್ ಒಳಗೆ ಕ್ರಿಮಿನಾಶಕ ಸಿಂಪಡಿಸುವುದು, ಜುಲೈನಿಂದ, ಸೆಪ್ಟೆಂಬರ್ ಒಳಗೆ ತೋಟದಲ್ಲಿ ಹದವಾದ ನೆರಳು ನಿರ್ವಹಣೆ ಮಾಡಿ ಕೊಳ್ಳಬೇಕು. ನಂತರ ಅಕ್ಟೋಬರ್‍ನಿಂದ ಡಿಸೆಂಬರ್‍ವರೆಗೆ ಕೀಟ ನಿಯಂತ್ರಣದ ಕೆಲಸದÀ ಪುನರಾವರ್ತನೆ ಮಾಡಬೇಕು ಎಂದು ಸಲಹೆ ನೀಡಿದರು. ಕಾಫಿ ಮಂಡಳಿ ವಿಸ್ತರÀಣಾ ನಿರೀಕ್ಷಕ ಲಕ್ಷ್ಮೀಕಾಂತ್ ಮಾತನಾಡಿ, ಇಲಾಖೆಯ ಮೂಲಕ ರೈತರಿಗೆ ಕಾಫಿ ಮರುನಾಟಿಗೆ ಸಹಾಯಧನ ನೀಡಲಾಗುತ್ತಿದೆ.

ಇದರೊಂದಿಗೆ ಕಾಫಿಗೆ ನೀರು ಹಾಯಿಸಲು, ಔಷಧಿ ಸಿಂಪಡಣೆ ಯಂತ್ರ ಸೇರಿದಂತೆ ಹಲವು ಯೋಜನೆಗಳಿದ್ದು, ರೈತರು ಕಚೇರಿಗೆ ಬಂದು ಸೌಲಭ್ಯಗಳನ್ನು ಪಡೆಯ ಬೇಕೆಂದರು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶೋಭಾ ಅವರು ಮಾತನಾಡಿ, ಸರ್ಕಾರ ವಾರ್ಷಿಕ ಹಲವು ಯೋಜನೆಗಳನ್ನು ಇಲಾಖೆ ಮೂಲಕ ನೀಡುತ್ತಿದ್ದು, ಈ ಹಿಂದೆ ಸೌಲಭ್ಯಗಳನ್ನು ಪಡೆದ ರೈತರೇ ಪ್ರತಿ ಬಾರಿ ಪಡೆಯುತ್ತಿದ್ದಾರೆ. ಯೋಜನೆ ಗಳು ಪ್ರತಿಯೊಬ್ಬ ಸಾಮಾನ್ಯ ರೈತನಿಗೂ ತಲಪುವಂತಾಗಬೇಕು ಎಂದರು.

ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಹೂವು, ಅಡಿಕೆ, ಬಾಳೆ ಬೆಳೆಯ ಬಗ್ಗೆ ಮಾಹಿತಿ ನೀಡುವುದ ರೊಂದಿಗೆ, ಯಂತ್ರೋಪ ಕರಣಗಳ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಆಯೋಜಕ ಕಿರಗಂದೂರು ಗೌತಮ್, ನಂದಿ ಸಂಸ್ಥೆ ಅಧ್ಯಕ್ಷ ಎ.ಕೆ. ಬಿದ್ದಪ್ಪ, ಕಾರ್ಯದರ್ಶಿ ಸಿ.ಎಸ್. ಅಜಿತ್, ಪ್ರಮು ಖರಾದ ಶಿವಕುಮಾರ್, ಚಿದಾನಂದ, ಸುಧೀರ್, ಗಿರೀಶ್, ಚಂದ್ರಾಜ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.