ಪ್ರಧಾನಿ ಆಸ್ತಿ ಮೌಲ್ಯ ರೂ. 36 ಲಕ್ಷ ಹೆಚ್ಚಳ
ನವದೆಹಲಿ, ಅ. 15: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯದಲ್ಲಿ ರೂ. 36 ಲಕ್ಷ ಹೆಚ್ಚಳವಾಗಿದೆ. ನರೇಂದ್ರ ಮೋದಿ ಅವರ ವಾರ್ಷಿಕ ಆಸ್ತಿ ವಿವರವನ್ನು ಪ್ರತಿ ವರ್ಷದಂತೆ ಪ್ರಧಾನಿ ಕಾರ್ಯಾಲಯ ಸ್ವಯಂ ಪ್ರೇರಣೆಯಿಂದ ಪ್ರಕಟಿಸಿದ್ದು, ಇದರಲ್ಲಿ 2020ರ ಜೂ. 30 ರವರೆಗಿನ ಮಾಹಿತಿಯನ್ನು ನೀಡಲಾಗಿದೆ. ಬ್ಯಾಂಕ್ನಲ್ಲಿ ಹೂಡಿಕೆ ಮಾಡಿರುವುದು ಮತ್ತು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಿಕ್ಕಿರುವ ಕಾರಣ ಆಸ್ತಿಯ ಮೌಲ್ಯ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ಸಾಲವನ್ನು ತೆಗೆದುಕೊಂಡಿಲ್ಲ ಮತ್ತು ಅವರ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ. 2020ರ ಜೂನ್ 30 ರ ವೇಳೆಗೆ ಪ್ರಧಾನಿ ಮೋದಿಯವರ ಬಳಿ ರೂ. 31,450 ಇತ್ತು. ಗಾಂಧಿನಗರ ಎಸ್ಬಿಐ ಶಾಖೆಯಲ್ಲಿ ಉಳಿತಾಯ ಖಾತೆಯಲ್ಲಿ ರೂ. 3,38,173 ಹಣ ಇದೆ. ಕಳೆದ ವರ್ಷ ಇದು ರೂ. 4,143 ಇತ್ತು. ಈ ಬ್ಯಾಂಕಿನಲ್ಲಿ ಎಫ್ಡಿಆರ್ ಮತ್ತು ಎಂಒಡಿ ಬ್ಯಾಲೆನ್ಸ್ ರೂ. 1,60,28,039 ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು ರೂ. 1,27,81,574 ಇತ್ತು. 2019 ರ ಲೋಕಸಭಾ ಚುನಾವಣೆಯ ಅಫಿಡವಿಟ್ನಲ್ಲಿ ಅವರು ಇದನ್ನು ಘೋಷಿಸಿದ್ದರು.
ರಸಗೊಬ್ಬರ ಅಭಾವ ಸೃಷ್ಟಿ ಜಾಲ ಪತ್ತೆ
ಬೆಂಗಳೂರು, ಅ. 15: ರೈತರ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ ಸೊಸೈಟಿಗಳ ಜೊತೆ ಶಾಮೀಲಾಗಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿ ಮಾಡುತ್ತಿದ್ದ ದೊಡ್ಡ ಜಾಲವನ್ನು ಬೇಧಿಸಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಡಿಗಿನಬೆಲೆ ಗ್ರಾಮದ ಮರ್ಕೂರಿ ಪಾಲಿಮರ್ಸ್ ಸಂಸ್ಥೆ ಪ್ರಾಥಮಿಕ ಸಹಕಾರ ಸಂಘ ವೇಮಗಲ್ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ ರೈತರಿಗೆ ಸಬ್ಸಿಡಿ ರೂಪದಲ್ಲಿ ಕೃಷಿ ಇಲಾಖೆ ವಿತರಿಸುತ್ತಿದ್ದ ಯೂರಿಯಾ ರಸಗೊಬ್ಬರವನ್ನು ದುರುಪಯೋಗಪಡಿಸಿಕೊಂಡು, ಕಾಂಟ್ರಾಕ್ಟ್ದಾರರನ್ನು ಬುಕ್ ಮಾಡಿಕೊಂಡು ನೈಟ್ರೋಜನ್ ಎಕ್ಸ್ಟ್ರಾಕ್ಟ್ ಮಾಡಿ ಕೆಮಿಕಲ್ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ರೈತರಿಗೆ ಗೊಬ್ಬರದ ಅಭಾವ ಸೃಷ್ಟಿಯಾಗಿರುವುದು ಕಂಡುಬಂದಿದೆ.
ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ
ಬೆಂಗಳೂರು, ಅ. 15: ಸ್ಯಾಂಡಲ್ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯ ಮೇಲೆ ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ದಾಳಿ ನಡೆಸಿದೆ. ವಿವೇಕ್ ಅವರ ಸಂಬಂಧಿಯಾಗಿರುವ ಆದಿತ್ಯ ಅಳ್ವಾ ಬೆಂಗಳೂರು ಡ್ರಗ್ಸ್ ಪ್ರಕರಣದ ಆರೋಪಿ. ಆತನನ್ನು ಹುಡುಕಿಕೊಂಡು ಪೆÇಲೀಸರು ವಿವೇಕ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಆದಿತ್ಯ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ಆತ ತಲೆಮರೆಸಿಕೊಂಡಿದ್ದಾನೆ. ಇಂದು ಸಿಸಿಬಿ ನ್ಯಾಯಾಲಯದ ವಾರಂಟ್ನೊಂದಿಗೆ ವಿವೇಕ್ ಅವರ ಮನೆಯಲ್ಲಿ ಹುಡುಕಾಟ ನಡೆಸಿದೆ. ಸಿಸಿಬಿ ಹೊರಡಿಸಿದ ಹೇಳಿಕೆಯ ಪ್ರಕಾರ, ಕಾಟನ್ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಬೇಕಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ. ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿರುವ ಆಳ್ವಾಗೆ ಆಶ್ರಯ ನೀಡಿದ್ದಾರೆಂಬ ಮಾಹಿತಿ ಇದ್ದು ಅದಕ್ಕಾಗಿ ನಾವು ಒಬೆರಾಯ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ಗದಗದ ಅಶ್ವಿನಿಗೆ ಅಂತರರಾಷ್ಟ್ರೀಯ ಮನ್ನಣೆ
ಗದಗ, ಅ. 15: ಮಹಿಳಾ ಸಾಕ್ಷರತೆ ಮತ್ತು ಸಬಲೀಕರಣಕ್ಕಾಗಿ ಗದಗದ ಅಶ್ವಿನಿ ದೊಡ್ಡಲಿಂಗಣ್ಣನವರ್ ಎಂಬವರು ಲೆನೆವೋದ ನ್ಯೂ ರಿಯಾಲಿಟಿ, ಟೆನ್ ವುಮೆನ್, ಒನ್ ವಲ್ರ್ಡ್ ನಲ್ಲಿ ಅಂತರರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ. ಈ ಮನ್ನಣೆ ಪಡೆದ ಭಾರತದ ಏಕೈಕ ಮಹಿಳೆಯಾಗಿದ್ದು, ಉಳಿದವರು ವಿವಿಧ ದೇಶಗಳ ಮಹಿಳೆಯರಾಗಿದ್ದಾರೆ. ಅಶ್ವಿನಿ ಅವರಿಗೆ ಈ ಮನ್ನಣೆ ದೊರೆತಿರುವುದಕ್ಕೆ ಇಡೀ ಗ್ರಾಮವೇ ಸಂಭ್ರಮಾಚರಣೆಯಲ್ಲಿ ತೊಡಗಿದೆ. ನರಗುಂದ ತಾಲೂಕಿನ ಕುರವಿನಕೊಪ್ಪ ಗ್ರಾಮದವರಾಗಿದ್ದಾರೆ, ಮೇಘ ಶಾಲಾ ಮೊಬೈಲ್ ಅಪ್ಲಿಕೇಷನ್ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. 10ನೇ ತರಗತಿ ನಂತರ ವಿವಾಹವಾಗಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವುದು ಗ್ರಾಮೀಣ ಪ್ರದೇಶಗಳಲ್ಲಿ ಸಂಪ್ರದಾಯವಾಗಿದೆ, ಆದರೆ ಅಶ್ವಿನಿ ಈ ಸಂಪ್ರದಾಯಕ್ಕೆ ಕಟ್ಟು ಬೀಳದೇ ಸಾಧನೆ ಮಾಡಬೇಕೆಂಬ ಹಠದಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಕೌಶಲ್ಯ ಆಧಾರಿತ ಕಲಿಕೆಯನ್ನು ಹುಡುಕುತ್ತಿರುವ ಹೆಣ್ಣು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.
187 ಸಾಂತ್ವನ ಕೇಂದ್ರಗಳು ಬಂದ್
ಬೆಂಗಳೂರು, ಅ. 15: ಹಣಕಾಸಿನ ಕೊರತೆ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಡಿ ಬರುವ ಸುಮಾರು 187 ಸಾಂತ್ವನ ಕೇಂದ್ರಗಳ ಬಾಗಿಲು ಬಂದ್ ಆಗಲಿದೆ. ಕೌಟುಂಬಿಕ ಕಲಹ, ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳ ಸಂತ್ರಸ್ತರಿಗೆ ತಾತ್ಕಾಲಿಕ ರಕ್ಷಣೆ ಒದಗಿಸಲು 2001 ರಲ್ಲಿ ಈ ಸಾಂತ್ವನ ಕೇಂದ್ರಗಳನ್ನು ತೆರೆಯಲಾಯಿತು. ಈ ಕೇಂದ್ರಗಳಲ್ಲಿ ಒಬ್ಬ ಕೌನ್ಸೆಲರ್ ಮತ್ತು ಮೂವರು ಸಾಮಾಜಿಕ ಕಾರ್ಯಕರ್ತೆಯರಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದರು. ಆದರೆ ಇಲಾಖೆಯ ಹಣಕಾಸು ಕೊರತೆಯಿಂದಾಗಿ ಈ ಕೇಂದ್ರಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಬಜೆಟ್ನಲ್ಲಿ ಈ ಕೇಂದ್ರಗಳಿಗೆ ಹಣದ ಅನುದಾನ ಇರಲಿಲ್ಲ, ಹೆಣ್ಣು ಮಕ್ಕಳ ಜನನಕ್ಕಾಗಿ ಸರ್ಕಾರ ರೂಪಿಸಿರುವ ಭಾಗ್ಯಲಕ್ಷ್ಮಿ ಯೋಜನೆ ಹಣದ ಅನುದಾನದಿಂದ ಈ ಕೇಂದ್ರಗಳು ನಡೆಯುತ್ತಿವೆ ಎಂದು ಮಹಿಳಾ ಮತ್ತು ಇಲಾಖೆ ನಿರ್ದೇಶಕ ಆರ್.ಎಸ್. ಪೆದ್ದಪ್ಪಯ್ಯ ತಿಳಿಸಿದ್ದಾರೆ.
ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ
ಮೈಸೂರು, ಅ. 15: ಮಂಗಳೂರಿನಿಂದ ಮೈಸೂರಿಗೆ ತಾ. 25 ರಿಂದ ವಿಮಾನ ಸೇವೆ ಪ್ರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಟ್ರಯಲ್ ರನ್ ನಂತರ ಕಾರ್ಯಸಾಧ್ಯತಾ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈಗ ರಸ್ತೆ ಮತ್ತು ರೈಲು ಮೂಲಕ ಸಂಪರ್ಕ ಹೊಂದಿರುವ ಈ ಎರಡು ನಗರಗಳ ನಡುವೆ ವಿಮಾನ ಸೇವೆ ಪ್ರಾರಂಭಿಸುವಂತೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮತ್ತು ಕೆಲವು ಕೈಗಾರಿಕೋದ್ಯಮಿಗಳು ವೈಮಾನಿಕ ಸಂಸ್ಥೆಗೆ ಮನವಿ ಮಾಡಿದ್ದರು. ಏರ್ ಇಂಡಿಯಾ ಬೆಂಗಳೂರಿನಿಂದ ಮಂಗಳುರಿಗೆ ಬೆಳಿಗ್ಗೆ 6.50ಕ್ಕೆ ಬರುವ ವಿಮಾನವನ್ನೇ ಮೈಸೂರಿನ ಕಡೆ ತಿರುಗಿಸುವ ಸೂಚನೆ ಇದೆ. ಈ ವಿಮಾನ ಬೆಳಿಗ್ಗೆ 7.55ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 8.50ಕ್ಕೆ ಮಂಗಳೂರು ತಲುಪಲಿದೆ.
ಸರ್ಕಾರಿ ಸಂಸ್ಥೆಗಳಲ್ಲಿ ಬಿಎಸ್ಎನ್ಎಲ್ ಕಡ್ಡಾಯ
ನವದೆಹಲಿ, ಅ. 15: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೆÇೀನ್ ನಿಗಮ ಲಿಮಿಟೆಡ್ (ಎಂಟಿಎನ್ಎಲ್) ಸೇವೆಗಳನ್ನು ಎಲ್ಲಾ ಸಚಿವಾಲಯಗಳು, ಸಾರ್ವಜನಿಕ ಇಲಾಖೆ ಮತ್ತು ಸಾರ್ವಜನಿಕ ಸೇವೆಗಳ ಘಟಕಗಳಲ್ಲಿ ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ ಸಚಿವಾಲಯಗಳು, ಕೇಂದ್ರ ಸರ್ಕಾರಿ ಇಲಾಖೆಗಳು, ಕೇಂದ್ರ ಸ್ವಾಯತ್ತ ಸಂಸ್ಥೆಗಳು, ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸೇವೆಗಳನ್ನು ಬಳಸಬೇಕೆಂದು ದೂರಸಂಪರ್ಕ ಇಲಾಖೆ ಲಿಖಿತ ಆದೇಶ ಹೊರಡಿಸಿದೆ. ಮೊನ್ನೆ ಅಕ್ಟೋಬರ್ 12ರಂದು ಕೇಂದ್ರ ದೂರಸಂಪರ್ಕ ಸಚಿವಾಲಯ ಈ ಆದೇಶ ಹೊರಡಿಸಿದ್ದು ಎಲ್ಲಾ ಸಚಿವಾಲಯಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ ಹೊರಡಿಸಿದೆ.
ಬಿದಿರಿನ ಚಿಗುರುಗಳನ್ನು ಸೇವಿಸಿ 3 ಸಾವು
ಭುವನೇಶ್ವರ, ಅ. 15: ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಕಚೇಲಿ ಗ್ರಾಮದಲ್ಲಿ ಬಿದಿರು ಚಿಗುರು ಸೇವಿಸಿದ್ದರೆನ್ನಲಾದ ಒಂದೇ ಕುಟುಂಬದ ಮೂವರು ಮಕ್ಕಳು ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿರುವ ನತದೃಷ್ಟರ ತಾಯಿ ಮತ್ತು ಮತ್ತೊಂದು ಮಗುವನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಮೃತ ಮೂವರು ಮಕ್ಕಳನ್ನು ಸುಕಂತಿ ಮಹ್ದಿ (12) ಆಕೆಯ ಸೋದರ ಸೀತಾರಾಮ್ (7) ಮತ್ತು ಸೋದರಿ ಅಂಜಲಿ (3) ಎಂದು ಗುರುತಿಸಲಾಗಿದೆ. ಏಳು ಸದಸ್ಯರ ಕುಟುಂಬ ಬಿದಿರಿನ ಚಿಗುರುಗಳನ್ನು ಸೇವಿಸಿದ ನಂತರ ತೀವ್ರ ಹೊಟ್ಟೆ ನೋವು ಮತ್ತು ಅತಿಸಾರದಿಂದ ಅಸ್ವಸ್ತರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಒಡಹುಟ್ಟಿದ ಮೂವರು ಮಕ್ಕಳು ಸಾವನ್ನಪ್ಪಿದ್ದರೆ, ತಾಯಿ ಮತ್ತು ಮತ್ತೊಬ್ಬ ಮಗು ಗಂಭೀರ ಸ್ಥಿತಿಯಲ್ಲಿದ್ದು ಮಲ್ಕನ್ ಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಇನ್ನಿಬ್ಬರು ಆರೋಗ್ಯದಿಂದಿದ್ದಾರೆ.