ಮಡಿಕೇರಿ, ಅ. 15: 2008ರ ಆಗಸ್ಟ್ 15 ರಂದು ಕೇಂದ್ರಾಡಳಿತ ಪ್ರದೇಶವಾದ ಲೇಹ್‍ನಲ್ಲಿ ರಕ್ಷಣಾ ಕಾರ್ಯ ಸಂದರ್ಭ ಹೆಲಿಕಾಪ್ಟರ್ ಅವಘಡದಲ್ಲಿ ಹುತಾತ್ಮರಾದ ಕೊಡಗಿನ ಮೇಜರ್‍ಗೆ ಇದೀಗ ಆ ಪ್ರದೇಶದಲ್ಲಿ ಫೀನಿಕ್ಸ್ ಸ್ಮಾರಕ ಕಲ್ಪಿಸಲಾಗಿದೆ. ಮೂಲತಃ ಕೊಡಗಿನ ಚೆಂಬೆಬೆಳ್ಳ್ಳೂರು ಗ್ರಾಮದ ಚಾರಿಮಂಡ ಸುನಿಲ್ ತಿಮ್ಮಯ್ಯ ಗಣಪತಿ ಅವರು ಅವಘಡದಲ್ಲಿ ಹುತಾತ್ಮರಾದ 12 ವರ್ಷಗಳ ಬಳಿಕ ಇದೀಗ ಫೀನಿಕ್ಸ್ ಸ್ಮಾರಕ ಮೂಲಕ ದೇಶದಲ್ಲಿ ಶಾಶ್ವತ ನೆನಪಿನಲ್ಲಿ ಉಳಿಯುವಂತಾಗಿದ್ದಾರೆ. ಆ ಸಂದರ್ಭ ಸುನಿಲ್ ಅವರೊಂದಿಗೆ ಮತ್ತೊಬ್ಬ ಮೇಜರ್ ಕೆ.ಇ ಪದ್ಮನಾಭನ್ ಅವರೂ ಜೊತೆಗಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಾರ್ಚು ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕಾಗಿ ಹೆಲಿಕಾಪ್ಟರ್ ಲೇಹ್‍ನಿಂದ ಹೊರಟು ‘ಟ್ಯಾಂಗ್ ಲ್ಯಾಂಗ್‍ಲ’ ಪಾಸ್ ಪ್ರದೇಶವನ್ನು ದಾಟುತ್ತಿದ್ದಂತೆ ಆಗಸದಲ್ಲಿ ದಟ್ಟ ಮೋಡ ಆವರಿಸಿತು. ಮೋಡಗಳು ತೀರಾ ಕೆಳಭಾಗಕ್ಕೂ ಪಸರಿಸಿತು. ಆಗಸದಲ್ಲಿ ದಾರಿ ಕಾಣದಾಗಿ ಕತ್ತಲು ಎದುರಾಯಿತು. ಪೈಲಟ್‍ಗಳಾಗಿ ಹೆಲಿಕಾಪ್ಟರ್ ಚಾಲಿಸುತ್ತಿದ್ದ ಸುನಿಲ್ ಮತ್ತು ಪÀದ್ಮನಾಭನ್ ದೇಶ ಸೇವೆ ಸಂದರ್ಭ ಪ್ರಾಕೃತಿಕ ವಿಕೃತಿಯಿಂದಾಗಿ ಸಂಭವಿಸಿದ ಅವಘಡದಲ್ಲಿ ಇಬ್ಬರೂ ಅಸ್ತಂಗತರಾದರು, ಬಲಿದಾನವಾದರು. ಇದೀಗ ಲೇಹ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಮಾದರಿಯೊಂದನ್ನು ಇರಿಸಿ ಅದರ ಕೆಳಭಾಗದಲ್ಲಿ ಫೀನಿಕ್ಸ್ ಅನ್ನು ಸ್ಥಾಪಿಸಲಾಗಿದ್ದು, ಈ ಇಬ್ಬರು ಹುತಾತ್ಮರ ಹೆಸರು ಮತ್ತು ಸೇವೆಯನ್ನು ಚಿರಸ್ಥಾಯಿಗೊಳಿಸಲಾಗಿದೆ.

ಸುನಿಲ್ ತಿಮ್ಮಯ್ಯ ಗಣಪತಿ ಅವರ ಕುಟುಂಬವೇ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಅವರ ತಂದೆ ಚೆಂಬೆಬೆಳ್ಳೂರುವಿನ ಚಾರಿಮಂಡ ಗಣೇಶ್ ಗಣಪತಿ ಅವರು ಸೇವೆಯಿಂದ ನಿವೃತ್ತಗೊಂಡ ಬಳಿಕ ತನ್ನ ಪತ್ನಿ ನಾಪೋಕ್ಲಿನ ಭವಾನಿ ಅವರೊಂದಿಗೆ ಹೈದರಾಬಾದ್‍ನಲ್ಲಿ ವಾಸವಿದ್ದಾರೆ. ಭವಾನಿ ಅವರ ತಂದೆ ಕಂಗಾಂಡ ಮುತ್ತಪ್ಪ ಅವರು ಕೂಡ ನಿವೃತ್ತ ಮೇಜರ್. ಅಲ್ಲದೆ ಭವಾನಿ ಅವರ ಓರ್ವ ಸಹೋದÀರ ಕಂಗಾಂಡ ತಿಮ್ಮಯ್ಯ ಅವರು ಬಿ.ಎಸ್.ಎಫ್‍ನಲ್ಲಿ ಸೇವೆ ಸಲ್ಲಿಸಿದ್ದು ಇದೀಗ ದಿವಂಗತರಾಗಿದ್ದಾರೆ. ಮತ್ತೊಬ್ಬ ಸಹೋದರ ಕೆ.ಎಂ. ನಂದಾ ಅವರು ನಿವೃತ್ತ ಕರ್ನಲ್ ಆಗಿದ್ದಾರೆ. ಸುನಿಲ್ ಗಣಪತಿ ಅವರಿಗೆ ಈ ಹಿಂದೆ ಮರಣೋತ್ತರ ಸೇನಾ ಪದಕವನ್ನು ನೀಡಲಾಗಿತ್ತು. ನವದೆಹಲಿಯ ಯುದ್ಧ ಸ್ಮಾರಕದಲ್ಲಿಯೂ ಅವರ ಹೆಸರು ಕೆತ್ತಲ್ಪಟ್ಟಿದೆ. ಸುನಿಲ್ ಅವರ ಪತ್ನಿ ಶುಭಾ ಅವರು ಕೂಡ ಕ್ಯಾಪ್ಟನ್ ಬಲ್ಲಚಂಡ ಮಂದಣ್ಣ ಅವರ ಪುತ್ರಿಯಾಗಿದ್ದು ಶುಭಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.