‘‘ದೇಶಕೋರ್ ಮಾದೇವಿ.. ಕಾವೇರಮ್ಮೆ ಮಾತಾಯಿ’’ ಈ ನುಡಿ ಕೊಡವರ ದೇಶೀಯ ಕಟ್ಟುಪಾಡಿನ ಧಾರ್ಮಿಕ ಗೀತೆಯಲ್ಲಿ ಉಲ್ಲೇಖಿತವಾಗಿದೆ. ಇಡೀ ದೇಶಕ್ಕೇ ಒಬ್ಬಳೇ ಮಹಾದೇವಿ. ಆಕೆಯೇ ಕಾವೇರಿ ಎಂಬ ಅರ್ಥವಿದೆ.
ಕೊಡಗಿನ ಪ್ರತೀ ಮನೆಯಲ್ಲಿಯೂ ಈ ಮಾತು ನಿಜವಾಗಿದೆ. ಕೊಡಗಿನ ನಿವಾಸಿಗಳ ಮನೆ ಮನಗಳಲ್ಲಿ ಶತಶತಮಾನಗಳಿಂದ ಕಾವೇರಿ ಮಾತೆಯಾಗಿ ನೆಲೆನಿಂತಿದ್ದಾಳೆ. ಬ್ರಹ್ಮಗಿರಿ ತಪ್ಪಲಿನ ತಲಕಾವೇರಿಯಲ್ಲಿ ಉಗಮಿಸುವ ಕೊಡವರ ಕುಲದೈವಿಯಾಗಿ, ಕೊಡಗಿನ ಜನತೆಗೆ ನಾಡದೇವಿಯಾಗಿ ಪೂಜಿಸಲ್ಪಡುವ ಕಾವೇರಿ ನದಿ ಕೊಡಗಿನ ಭಕ್ತರ ಪಾಲಿಗೆ ಬರೀ ನದಿ ಮಾತ್ರವೇ ಅಲ್ಲ. ಕಾವೇರಿ ಎಂಬ ಹೆಸರು ಕೊಡಗಿನ ಜನತೆಯ ಪಾಲಿಗೆ ನದಿ ರೂಪದಲ್ಲಿ ಲೋಕಪಾವನೆಯಾಗಿರುವ ದೇವತೆಯ ಹೆಸರು ಕೂಡ ಹೌದು.
ಕಾವೇರಿ ನದಿ ಹಲವಾರು ನದಿಗಳಂತೆ ಕೇವಲ ನೀರು ನೀಡುತ್ತಾ ಹರಿಯುವುದಿಲ್ಲ. ಕೊಡಗಿನ ಕಾವೇರಿ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ನವರೆಗೆ ಹರಿಯುವ ಮಾರ್ಗದಲ್ಲಿ ಸಂಸ್ಕøತಿಯ ಮಹತ್ವ ಸಾರುತ್ತಾಳೆ. ಧಾರ್ಮಿಕತೆಯನ್ನು ಸಿಂಪಡಿಸುತ್ತಾ ಹರಿಯುತ್ತಾಳೆ. ಸುಖ ನೆಮ್ಮದಿಯನ್ನು ಸಂಭ್ರಮದಿಂದಲೇ ಹರಿಯುತ್ತಾ ಮುಂದೋಡುತ್ತಾಳೆ. ಹೀಗಾಗಿಯೇ ಕಾವೇರಿ ಕೇವಲ ನದಿ ಮಾತ್ರವೇ ಆಗಿರದೇ ಆಕೆಯೊಂದು ಸಂಸ್ಕøತಿ, ಆಕೆಯೊಂದು ಶಕ್ತಿ, ಆಕೆಯೊಂದು ಮಹಾಮಾಯೆ ರೂಪದಲ್ಲಿ ಕಾಣಿಸುತ್ತಾಳೆ.
ಕಾವೇರಿಯ ಉಗಮದ ತಾಣದಲ್ಲಿ ವರ್ಷಕ್ಕೊಮ್ಮೆ ತೀರ್ಥೋದ್ಭವ ರೂಪದಲ್ಲಿ ಆಕೆ ಕಾಣಿಸಿಕೊಳ್ಳುವುದು ಜಗತ್ತಿನಲ್ಲಿಯೇ ಒಂದು ವಿಸ್ಮಯಕಾರಿ ದೃಶ್ಯ. ಕರ್ನಾಟಕದಲ್ಲಿ ಜೀವನದಿಯಾಗುವ ಕಾವೇರಿ ತಮಿಳುನಾಡಿನ ಪಾಲಿಗೆ ಭಾಗ್ಯನದಿ.
ತಂದೆಗೆ ಕೊಟ್ಟ ಮಾತಿನಂತೆ ಮಾತು ತಪ್ಪಿದ ಪತಿಯನ್ನು ಅಗಲಿ ಲೋಕಕ್ಕೆ ಕಲ್ಯಾಣ ಮಾಡಲೋಸ್ಕರವೇ ತಾನು ನದಿಯಾಗಿ ಹರಿಯುತ್ತಾ ಸಾಗಿ ಲೋಕಕ್ಕೇ ಒಳಿತುಂಟುಮಾಡಿದ ಲೋಕಪಾವನೆಯೇ ಕವೇರನ ಕುವರಿ. ನಮ್ಮ ಕಾವೇರಿ.
ತಲಕಾವೇರಿಯಿಂದ ಪೂಂಪುಹಾರ್ನವರೆಗೆ ಕಾವೇರಿ ಸಾಗುವಲ್ಲಿ ಎಷ್ಟೊಂದು ಪುಣ್ಯ ಕ್ಷೇತ್ರಗಳು, ಎಷ್ಟೊಂದು ದೈವಿಕ, ಧಾರ್ಮಿಕ ಕ್ಷೇತ್ರಗಳು. ರಾಜರ ಕಾಲದ, ಇತಿಹಾಸದ ಕುರುಹುಗಳು. ಪುರಾಣ ಪ್ರಸಿದ್ಧ ಸ್ಥಳಗಳು. ಕಾವೇರಿ ತೀರದಲ್ಲಿ ಎಷ್ಟೊಂದು ಗ್ರಾಮದೇವಾನುದೇವತೆಯರು, ಶಿವಕ್ಷೇತ್ರಗಳು, ಸಾವಿರಾರು ಗ್ರಾಮಗಳು, ನೂರಾರು ನಗರಪಟ್ಟಣಗಳು, ಸಂಗಮ-ಸ್ಥಳಗಳು, ಅಣೆಕಟ್ಟೆಗಳು, ಜಲಧಾರೆಗಳು, ಸಾಧುಸಂತರಿಗೆ, ಆಚಾರ್ಯರಿಗೆ, ಕವಿ ಸಾಹಿತಿಗಳಿಗೆ, ಹಾಡುಗಾರರಿಗೆ, ಸಂಗೀತ ವಿದ್ವಾಂಸರಿಗೆ, ಕಲಾವಿದರಿಗೆ, ಹೀಗೆ ಖ್ಯಾತನಾಮರಿಗೆ ನೀರುಣಿಸಿದ ಮಹಾಮಹಿಮಳು ನಮ್ಮ ನೆಲದ ಕಾವೇರಿಯಲ್ಲವೇ ?
ಕೊಂಗಾಳ್ವ, ಚೆಂಗಾಳ್ವರು, ಚೋಳರು,ಹಾಲೇರಿ ರಾಜವಂಶಸ್ಥರು, ಮೈಸೂರು ಒಡೆಯರು, ವಿಜಯನಗರ ಅರಸರು,ಹೀಗೆ ಕಾವೇರಿ ಸಾಗಿದ ಭುವಿಯಲ್ಲಿ ಉದಯಿಸಿದ ರಾಜವಂಶಸ್ಥರು ಅದೆಷ್ಟು ಮಂದಿ...
ಕಾವೇರಿ ಹಸನಾಗಿಸಿದ ಕೃಷಿಗೇನು ಕಡಿಮೆಯೇ ? ತವರೂರಿನಲ್ಲಿ ಕಾಫಿ, ಕರಿಮೆಣಸು, ಭತ್ತ, ಹರಿಯುತ್ತಾ ಸಾಗಿದಂತೆಲ್ಲಾ ರಾಗಿ, ಜೋಳ, ತೆಂಗುಕಂಗು, ಅಡಿಕೆ, ಮಾವು, ಹುಲ್ಲುಗಾವಲು.
ಬ್ರಹ್ಮಗಿರಿಯ ತಪ್ಪಲಲ್ಲಿ ಹುಟ್ಟಿ, ಬೆಟ್ಟದಿಂದ ಪುಟ್ಟ ಝರಿಯಾಗಿ ಕಾನನದ ನಡುವೆ ಇಳಿದು ಭಗಂಡಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಕನ್ನಿಕೆ, ಸುಜ್ಯೋತಿಯರನ್ನೂ ಜತೆಗೂಡಿಸಿಕೊಂಡು ಮುಂದಕ್ಕೆ ಸಾಗುತ್ತಾ ಎಷ್ಟೊಂದು ಲಕ್ಷ ಜನರ ಬದುಕು ಹಸನಾಗಿಸಿದ್ದಾಳೆ ಕೊಡಗಿನ ಕವೇರಪುತ್ರಿ..ಯಾವ ನದಿಗೆ ಉಂಟು ಇಂಥ ಹಿರಿಮೆ ?
ತಲಕಾವೇರಿಯಿಂದ ಪೂಂಪುಹಾರ್ನವರೆಗೆ ಕಾವೇರಿ ಹರಿಯುವ ಮಾರ್ಗದ ಅಂತರ ಸರಿಸುಮಾರು 765 ಕಿಲೋಮೀಟರ್, ಹತ್ತಾರು ಜಿಲ್ಲೆಗಳು, ನೂರಾರು ಗ್ರಾಮಗಳು. ಎರಡು ರಾಜ್ಯಗಳು, ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸಿ, ಕೋಟ್ಯಾಂತರ ರೂಪಾಯಿ ವಹಿವಾಟಿನ ಉದ್ಯಮಕ್ಕೂ ಕಾರಣಳಾಗಿ, 140 ಕ್ಕೂ ಅಧಿಕ ದೇವಾಲಯಗಳನ್ನು ತನ್ನ ತೀರದಲ್ಲಿ ಹೊಂದಿ, ದಿನನಿತ್ಯ ಸಾವಿರಾರು ಭಕ್ತರಿಗೆ ವಿವಿಧ ದೇವಾನುದೇವಿಯರ ದರ್ಶನಕ್ಕೂ ಕಾರಣಳಾಗಿರುವ ಕಾವೇರಿ ಮಹಾಶಕ್ತಿಯ ದ್ಯೋತಕವೇ ಸರಿ.
ತಲಕಾವೇರಿಯಲ್ಲಿ ಪುಟ್ಟ ಕುಂಡಿಕೆಯಲ್ಲಿ ಉಗಮಿಸುವ ಕಾವೇರಿಯನ್ನು ತಮಿಳುನಾಡಿನ ಶ್ರೀರಂಗಂನಲ್ಲಿ ಗಮನಿಸಿದರೆ ಸಮುದ್ರದಷ್ಟು ವಿಶಾಲವಾಗಿ ಕಂಗೊಳಿಸುವ ಈಕೆಯೇ ನಮ್ಮ ತಲಕಾವೇರಿಯ ಕಾವೇರಿಯೇ ಎಂಬ ಭಾವನೆ ಮೂಡದೇ ಇರದು. ತಾನು ಹರಿದು ಸಾಗಿದಲ್ಲೆಲ್ಲಾ ಹಸಿರು ರಾಶಿಯನ್ನೇ ಹರಿಸಿ ಶ್ರೀರಂಗಂನಲ್ಲಿ ಕಡಲಿನಷ್ಟು ವಿಶಾಲವಾಗುವ ಕಾವೇರಿ ಮತ್ತೆ 80 ಕಿ.ಮೀ. ಮುಂದಕ್ಕೆ ಸಾಗಿ ಪೂಂಪುಹಾರ್ನಲ್ಲಿ ಬಂಗಾಳಕೊಲ್ಲಿ ಸೇರುವಾಗ ಮತ್ತೆ ಮೂಲಸ್ವರೂಪಕ್ಕೆ ಬಂದು ಕಿರಿದಾಗಿ ಒಂದು ಸುದೀರ್ಘ ಪಯಣಕ್ಕೆ ಅಂತ್ಯಹಾಡುತ್ತಾಳೆ.
ಭಾಗಮಂಡಲದ ತ್ರಿವೇಣಿ ಸಂಗಮ, ಮಂಡ್ಯದ ಕೆ.ಆರ್.ಎಸ್ ಎಂಬ ವಿಶ್ವವಿಖ್ಯಾತ ಉದ್ಯಾನವನ, ಪಕ್ಕದಲ್ಲಿಯೇ ಏಳು ಕವಲುಗಳಾಗಿ ಧುಮ್ಮಿಕ್ಕುವ ಬಲಮುರಿ ತೊರೆ, ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣ ದ್ವೀಪ, ಮರಳಿನಿಂದ ಆವೃತವಾದ ದೇವಾಲಯಗಳ ತಲಕಾಡು, ಅಲ್ಲಿಂದ ಮುಂದೆ ಭೋರ್ಗರೆದು.. ಧುಮ್ಮಿಕ್ಕಿ ವಿದ್ಯುತ್ ಉತ್ಪಾದನೆಗೂ ಕಾರಣವಾಗುವ ಶಿವನಸಮುದ್ರದ ಗಗನ ಚುಕ್ಕಿ, ಬರಚುಕ್ಕಿ ಎಂಬ ರಮಣೀಯ, ಜಲಧಾರೆಗಳು, ಕರ್ನಾಟಕದ ಕೊನೆಯಲ್ಲಿ ಮೇಕೆದಾಟು ಎಂಬ ಶಿಲ್ಪ ವೈಭವದ ವಿಶಿಷ್ಟ ತಾಣದ ಸೃಷ್ಟಿಗೂ ಕಾವೇರಿ ಕಾರಣಕರ್ತಳು.
ಮೇಕೆದಾಟಿನಿಂದ 45 ಕಿ.ಮೀ. ದೂರದಲ್ಲಿ ಹೊಗೆನಕಲ್ ಎಂಬ ಪ್ರಸಿದ್ದ ಜಲಧಾರೆಗಳ ಮೂಲಕ ಮನಮೋಹಕವಾಗಿ ಧುಮ್ಮಿಕ್ಕುತ್ತಾ ತಮಿಳುನಾಡಿಗೆ ಕಾವೇರಿಯ ಪ್ರವೇಶವಾಗುತ್ತದೆ. ಮುಂದೆ ಬೆಟ್ಟಗಳ ನಡುವೇ ಸಾಗುವ ಕಾವೇರಿಗೆ ಅಲ್ಲೆಲ್ಲಾ ಕೊಡಗಿನ ನೆನಪಾಗುವಷ್ಟು ಸುಂದರ ಕಾನನಗಳು ಅವು.
ಭವಾನಿ ಕ್ಷೇತ್ರ, ಈರೋಡು, ಸುಪ್ರ್ರಸಿದ್ದ ವೈಷ್ಣವ ಕ್ಷೇತ್ರ ಶ್ರೀರಂಗಂ,ತಿರುಚ್ಚಿ, ತಂಜಾವೂರು ಗಳಿಗಾಗಿ ಮುಂದೆ ಹರಿಯುತ್ತಾ ಸಾಗಿದರೆ ಎತ್ತ ನೋಡಿದರೂ ಭತ್ತದ ಕಣಜವೇ ಕಂಗೊಳಿಸುತ್ತದೆ. ತಮಿಳುನಾಡಿನ ರೈತರು ವಾರ್ಷಿಕವಾಗಿ ಭತ್ತದ ಎರಡು ಬೆಳೆಗಳನ್ನು ತೆಗೆದು ಸಿರಿವಂತರಾಗಿರುವುದರಲ್ಲಿ ಕಾವೇರಿಯ ಪಾತ್ರವೇ ಮುಖ್ಯವಾಗಿದೆ. ಕುಂಭಕೋಣಂ ಎಂಬ ಮತ್ತೊಂದು ಮುಖ್ಯ ಧಾರ್ಮಿಕ ಕ್ಷೇತ್ರಕ್ಕೂ ನೀರುಣಿಸುವ ಕಾವೇರಿ ಅನೇಕ ಶಿವಕ್ಷೇತ್ರಗಳನ್ನು ಸೃಷ್ಟಿಸುತ್ತಾ ಮಯೂರಂ ಎಂಬ ಪೇಟೆಯಲ್ಲಿ ಮಯೂರನಾಥನ ದೇವಾಲಯ ತೀರದಲ್ಲಿ ವಿಶಾಲವಾಗಿ ಹರಿಯುತ್ತಾ ಸಾಗಿ ಕೊನೆಗೇ ಪೂಂಪುಹಾರ್ ಅಥವಾ ಕಾವೇರಿ ಪೂಂಪಟ್ಟಣ ಸೇರುತ್ತಾಳೆ. ಇಲ್ಲಿಗೆ ಬರುವಾಗ ಕಾವೇರಿ ಮೂಲಸ್ವರೂಪದಲ್ಲಿ ಕಿರಿದಾಗಿ ಹರಿದು ಬರುತ್ತಾಳೆ ಎಂಬುದು ವಿಶೇಷ. ಕಾವೇರಿ ತನ್ನ 760 ಕಿ.ಮೀ. ಮಾರ್ಗದುದ್ದಕ್ಕೂ ಕನ್ನಡ, ಕೊಡವ, ಅರೆಭಾಷೆ, ಮಲಯಾಳ, ತಮಿಳು, ತೆಲುಗು, ತಮಿಳು, ಹೀಗೆ ನಾನಾ ರೀತಿಯ ವಿಭಿನ್ನ ಭಾಷಿಕರಿಗೆ ನೀರು ನೀಡಿರುತ್ತಾಳೆ. ಪಂಥಗಳನ್ನು ಮರೆತು ನೂರಾರು ದೇವಾಲಯಗಳ ಸೃಷ್ಟಿಗೆ ಕಾರಣಳಾಗುತ್ತಾಳೆ. ಕಾವೇರಿಯ ಹೆಸರಿನಲ್ಲಿ ರೈತರು, ಉದ್ಯಮಿಗಳು, ವ್ಯಾಪಾರಸ್ಥರು, ಪ್ರವಾಸೋದ್ಯಮಿಗಳು, ರಾಜಕಾರಣಿಗಳು ಹೀಗೆ ವಿವಿಧ ರಂಗದವರು ಜೀವನ ಕಂಡುಕೊಂಡಿದ್ದಾರೆ. ನದಿಯೊಂದು ಜೀವಸೆಲೆ ಸೃಷ್ಟಿಸುತ್ತಾ ಸಾಗುವ ಅದ್ಭುತಕ್ಕೆ ಕಾವೇರಿ ಸಾಕ್ಷಿಯಾಗಿದ್ದಾಳೆ. ಶಿವನಸಮುದ್ರ, ಮೆಟ್ಟೂರುಗಳಲ್ಲಿ ನದಿಯಿಂದ ವಿದ್ಯುತ್ ಕೂಡ ಉತ್ಪಾದನೆಯಾಗುತ್ತಿದೆ. ತಮಿಳುನಾಡಿನಲ್ಲಿ ಕಾವೇರಿ ಉಯ್ಯಾಲೆ ಆಡಿ ವಿಶ್ರಮಿಸಿದ ಸ್ಥಳ ಎಂಬ ಸ್ಮರಣೆಗಾಗಿ ಈ ಊರಿಗೆ ಉಯ್ಯಾಲೆಯ ಊರು, ಉಂಜಿಲೂರು ಎಂಬ ಹೆಸರೇ ಇದೆ.! ಅಂತೆಯೇ ಕಾವೇರಿ ತಟದಲ್ಲಿನ ಶ್ರೀರಂಗಂ ಕ್ಷೇತ್ರ ವಿಶ್ವದ ಅತೀ ದೊಡ್ಡ ಹಿಂದೂ ದೇವಾಲಯ ಸಂಕೀರ್ಣವಾಗಿಯೂ ದಾಖಲೆ ಮೆರೆದಿದೆ. ಭಾಗಮಂಡಲದಲ್ಲಿ ಕನ್ನಿಕೆ, ಸುಜ್ಯೋತಿಯರನ್ನು ತನ್ನೊಂದಿಗೆ ವಿಲೀನವಾಗಿಸುವ ಕಾವೇರಿ ನದಿಯು ಭವಾನಿಯಲ್ಲಿ ಭವಾನಿ ಮತ್ತು ಅಮೃತ ಎಂಬ ನದಿಗಳನ್ನು ವಿಲೀನವಾಗಿಸಿಕೊಳ್ಳುತ್ತಾಳೆ.
ಸಾವಿರಾರು ಹೆಕ್ಟೇರ್ ಕಾಡುಗಳು, ಲಕ್ಷಾಂತರ ವನ್ಯಜೀವಿಗಳೂ ಕಾವೇರಿಯ ಮಡಿಲಲ್ಲಿ ಜೀವಂತಿಕೆ ಕಂಡುಕೊಂಡಿದೆ. 578 ಉಪನದಿಗಳ ಮೂಲಕ ಅತ್ಯಧಿಕ ಉಪನದಿಗಳನ್ನು ಹೊಂದಿದ ಮುಖ್ಯನದಿ ಎಂಬ ಹಿರಿಮೆಗೂ ಕಾವೇರಿ ಪಾತ್ರಳಾಗಿದ್ದಾಳೆ.
ಪಂಜೆಮಂಗೇಶರಾಯರ ಹುತ್ತರಿ ಹಾಡಿನಲ್ಲಿ ‘‘ಕಾವೇರಿ ಹೊಳೆ ಹೊಳೆಹೊಳೆವಳೋ.. ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆಕಳೆವಳೋ...’’ ಎಂಬ ಸಾಲುಗಳೇ ಅದ್ಭುತವಾಗಿದೆ. ಕಾವೇರಿ ಕುರಿತು ಸಮಗ್ರ ಅಧ್ಯಯನ ಮಾಡಿದ್ದ ನಾಡಿನ ಹಿರಿಯ ಸಾಹಿತಿ ದಿ.ಎದುರ್ಕಳ ಶಂಕರನಾರಾಯಣ ಭಟ್ ಹೇಳಿದಂತೆ ,
ಕಾ - ವರ್ಣವು ಕಲುಷಿತಗಳ ನಿವಾರಣೆ.
ವೇ - ವರ್ಣವು ಇಷ್ಟಾರ್ಥ ಸಿದ್ದಿ
ರಿ - ವರ್ಣವು ಮೋಕ್ಷ ನೀಡುತ್ತದೆ.
ಈ ಮೂರೂ ವರ್ಣ ಒಳಗೊಂಡು ಕಾವೇರಿ ಹೆಸರು ಬಂದಿದೆಯಂತೆ
ಕಾವೇರಮ್ಮೆ ಹೆಸರಿಗೆ ತಕ್ಕಂತೆ ಎಲ್ಲರ ಪಾಲಿಗೆ ನಿಜವಾದ ಅಮ್ಮನೇ ಆಗಿ ಮಮತೆ, ಆರೈಕೆ ನೀಡುತ್ತಲೇ ಬಂದಿದ್ದಾಳೆ. ಈಕೆಯಿಂದಾಗಿಯೇ ಲಕ್ಷಾಂತರ ಜನರ ಬದುಕು ಬಂಗಾರವಾಗಿದೆ. ಹೀಗಾಗಿಯೇ ಕಾವೇರಿ ಬಂಗಾರದ ನದಿಯಂತಾಗಿದ್ದಾಳೆ.
ತನ್ನ ಸುಂದರ ಜೀವನವನ್ನೇ ಜನರ ಕಲ್ಯಾಣಕ್ಕೋಸ್ಕರ ಮುಡಿಪಾಗಿಟ್ಟ ಕಾವೇರಿ ಸದಾ ಶಾಂತಿ, ನೆಮ್ಮದಿಯನ್ನೇ ಬಯಸಿದ್ದಾಳೆ. ಹೀಗಾಗಿ ಕಾವೇರಿ ತೀರ ಎಂದೆಂದಿಗೂ ಪ್ರಶಾಂತವಾಗಿಯೇ ಇದೆ. ಈ ಸೂಕ್ಷ್ಮವನ್ನು ಅರಿತು ಕೊಳ್ಳುವ ಸಾರ್ಥಕತೆ ನಮ್ಮಲ್ಲಿದ್ದರೆ ಆ ಮಹಾಮಾತೆಗೆ ನಾವು ನೀಡುವ ಕೊಡುಗೆ ಬೇರೆ ಇಲ್ಲ. ಇದು ಅರ್ಥವಾಗಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ? ಅನಿಲ್ ಹೆಚ್. ಟಿ.