ಮುಳ್ಳೂರು, ಅ. 15: ಸಮೀಪದ ನಿಡ್ತ ಗ್ರಾ.ಪಂ.ಯಲ್ಲಿ ರೈತರ ಕ್ರಿಯಾ ಯೋಜನೆ ಅಭಿಯಾನ ಚಾಲನೆ ಮತ್ತು ಅನುಷ್ಠಾನ ಕಾರ್ಯಕ್ರಮ ಹಾಗೂ ಕೇಂದ್ರ ಸರಕಾರದ ಗ್ರಾಮೀಣ ‘ಸ್ವಮಿತ್ವ’ ಯೋಜನೆ ಅರಿವು ಕಾರ್ಯಕ್ರಮ ಕುರಿತು ವಿಶೇಷ ಗ್ರಾಮಸಭೆ ನಡೆಯಿತು.

ಒಡೆಯನಪುರ ಗ್ರಾಮದ ಸಾರ್ವಜನಿಕ ಸಮುದಾಯ ಭವನದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಸೋಮವಾರಪೇಟೆ ತಾಲೂಕು ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿ ಸಚಿನ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರೈತರ ಕ್ರಿಯಾ ಯೋಜನೆ ಅಭಿಯಾನ ಕಾರ್ಯಕ್ರಮ ಕುರಿತು ನಿಡ್ತ ಗ್ರಾ.ಪಂ. ಪಿಡಿಒ ಪ್ರತಿಮಾ ಮಾಹಿತಿ ನೀಡಿ, ಸರಕಾರ ರೈತರಿಗೆ ತೋಟಗಾರಿಕೆ, ಕೃಷಿ ಇಲಾಖೆಯಿಂದ ಸಿಗುವ ಸೇವೆ ಸವಲತ್ತುಗಳ ಬಗ್ಗೆ ಗ್ರಾ.ಪಂ. ವ್ಯಾಪ್ತಿಯ ರೈತರುಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. 2020ನೇ ಸಾಲಿನ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದ್ದು ಅದರಂತೆ ರೈತರಿಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಜಾಬ್‍ಕಾರ್ಡ್ ಹೊಂದಿರುವ ರೈತರು ಸೇವೆ ಸವಲತ್ತುಗಳು, ಎನ್.ಆರ್.ಜಿ.ವೈ. ಯೋಜನೆಯಿಂದ ಜಾಬ್‍ಕಾರ್ಡ್ ಹೊಂದಿರುವ ರೈತರು ವೈಯುಕ್ತಿಕ ಸವಲತ್ತುಗಳಿಗೆ ಅರ್ಹರಾಗುತ್ತಾರೆ, ತೋಟಗಾರಿಕೆ ಬೆಳೆಯ ಜೊತೆಯಲ್ಲಿ ರೇಷ್ಮೆ ಕೃಷಿ ಮಾಡಲು ಆಸಕ್ತಿ ಇರುವ ರೈತರು ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ಕೇಂದ್ರ ಸರಕಾರದ ಗ್ರಾಮೀಣ ಸ್ವಮಿತ್ವ ಯೋಜನೆ ಬಗ್ಗೆ ತಾಲೂಕು ಭೂ ಮಾಪನ ಅಧಿಕಾರಿ ರಮೇಶ್ ಮಾಹಿತಿ ನೀಡಿ, ಗ್ರಾಮೀಣ ಪ್ರದೇಶದಲ್ಲಿ 10 ಕ್ಕಿಂತ ಹೆಚ್ಚಿಗೆ ಗುಂಪು ಮನೆಗಳಿಗೆ ಪ್ರಾಪರ್ಟಿ ಕಾರ್ಡ್ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ನೂತನವಾಗಿ ಗ್ರಾಮೀಣ ಸ್ವಮಿತ್ವ ಯೋಜನೆ ಜಾರಿಗೊಳಿಸಿದೆ ಎಂದರು. ಅರಣ್ಯ, ಊರೂಡುವೆ ಜಾಗದಲ್ಲಿ ಗುಂಪು ಮನೆ ಕಟ್ಟಿಕೊಂಡಿರುವ ಮನೆ ಮಾಲೀಕರಿಗೆ ಸ್ವಮಿತ್ವ ಯೋಜನೆಗೆ ಫಲಾನುಭವಿಯಾಗುವುದಿಲ್ಲ ಉಳಿದಂತೆ ಪೈಸಾರಿ ಜಾಗದಲ್ಲಿನ ಗುಂಪು ಮನೆಗಳಿಗೆ ಪ್ರಾರ್ಪಟಿ ಕಾರ್ಡ್ ಸಿಗುತ್ತದೆ. ಆದರೆ ಭೂ ಮಾಪನ, ಕಂದಾಯ ಇಲಾಖೆ ಮತ್ತು ಗ್ರಾ.ಪಂ. ಮೂಲಕ ಸರ್ವೆ ಕಾರ್ಯ ನಡೆದ ಮೇಲಷ್ಟೆ ಸ್ವಮಿತ್ವ ಯೋಜನೆ ಬಗ್ಗೆ ಮುಂದಿನ ಪ್ರಗತಿ ಕಾರ್ಯವು ನಡೆಯಲಿದೆ ಎಂದರು.

ಆಡಳಿತಾಧಿಕಾರಿ ಸಚಿನ್ ಕುಮಾರ್ ಮಾತನಾಡಿ, ಸರಕಾರದ ಯೋಜನೆಗಳನ್ನು ಜನರು ಸದುಪಯೋಗಿಸಿಕೊಳ್ಳಬೇಕು, ಕೇಂದ್ರ ಸರಕಾರ ಸ್ವಚ್ಛ ಭಾರತ ಯೋಜನೆ ಜಾರಿಗೊಳಿಸಿದ್ದು, ಇದೀಗ ನೂತನವಾಗಿ ಗ್ರಾಮೀಣ ಪ್ರದೇಶದ ಜನರು ಸ್ವಮಿತ್ವ ಯೋಜನೆ ಮೂಲಕ ಎಲ್ಲಾ ರೀತಿಯ ಸೇವೆ ಸವಲತ್ತುಗಳಿಗೆ ಹಕ್ಕುದಾರರಾಗುವ ಉದ್ದೇಶದಿಂದ ಯೋಜನೆಯನ್ನು ಅನುಷ್ಠಾನ ಗೊಳಿಸಿದೆ ಎಂದರು. ಗ್ರಾಮ ಸಭೆಯಲ್ಲಿ ಗ್ರಾ.ಪಂ. ಕಾರ್ಯದರ್ಶಿ ಕುಶಾಲಪ್ಪ ಹಾಜರಿದ್ದರು. ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.