ಮಡಿಕೇರಿ, ಅ. 15: ಪವಿತ್ರ ತಲಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಗೆ ಭಕ್ತಾದಿಗಳು ಪಾಲ್ಗೊಳ್ಳಲು ನಿರ್ಬಂಧ ವಿಧಿಸಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಆಕ್ಷೇಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಜಿಲ್ಲೆಯ ಭಕ್ತರು ವರ್ಷಕ್ಕೊಮ್ಮೆ ಘಟಿಸುವ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳುವದು ಭಕ್ತಿಯ ಪ್ರತೀಕವಾಗಿದೆ. ಪ್ರಸ್ತುತ ಕೋವಿಡ್ ಕಾರಣದಿಂದಾಗಿ ಭಕ್ತಾದಿಗಳ ಭಾವನೆಗೆ ಧಕ್ಕೆ ತರುವಂತಹ ನಿಯಮಕ್ಕೆ ಜಿಲ್ಲಾಡಳಿತ ಮುಂದಾಗಿರುವದು ಸರಿಯಲ್ಲ. ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಲು ಯಾರು ಕಾರಣ ಎಂದಿರುವ ಅವರು ತಾ. 17ರ ಕಾರ್ಯ ನಿಗದಿಯಾಗಿದ್ದು, ಜಿಲ್ಲಾಡಳಿತ ಸುಮಾರು ಹದಿನೈದು ದಿನಗಳಿಂದಲೇ ಪ್ರವಾಸಿಗರು ಸೇರಿದಂತೆ ಸ್ಥಳೀಯರಲ್ಲದೆ ಹೊರ ಭಾಗದ ಜನರನ್ನು ಈ ಹಿಂದಿನಂತೆ ತಡೆಯಬಹುದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಮೊದಲೇ ಪಡೆದಿಲ್ಲ. ಕೊನೆಗಳಿಗೆಯಲ್ಲಿ ಇಂತಹ ನಿರ್ಬಂಧ ಸಮಂಜಸವಲ್ಲ ಎಂದಿರುವ ಅವರು ಸ್ಥಳೀಯ ಭಕ್ತರಿಗೆ ಸೂಕ್ತ ಅವಕಾಶ ಕಲ್ಪಿಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.