*ಗೋಣಿಕೊಪ್ಪಲು, ಅ. 15: ಕಾಡಾನೆ ದಾಳಿಗೆ ನೂರಾರು ಎಕರೆ ಭತ್ತದ ಕೃಷಿ ನಾಶವಾಗಿರುವ ಘಟನೆ ನಾಗರಹೊಳೆ ವನ್ಯಜೀವಿ ವಿಭಾಗದ ತಿತಿಮತಿ ದೇವಮಚ್ಚಿಯಲ್ಲಿ ಜರುಗಿದೆ. ದೇವಮಚ್ಚಿ ಅರಣ್ಯದಂಚಿನಲ್ಲಿರುವ ಇಟ್ಟೀರ ಪೊನ್ನಪ್ಪ ಹಾಗೂ ಇತರರ ಗದ್ದೆಗಳಿಗೆ ಪ್ರತಿ ದಿನ ಸಂಜೆಯಾಗುತ್ತಲೇ ದಾಳಿ ನಡೆಸುವ ಕಾಡಾನೆಗಳ ಹಿಂಡು ಬೆಳೆದು ನಿಂತಿರುವ ಭತ್ತದ ಪೈರನ್ನು ನಾಶಪಡಿಸಿವೆ. ಅರಣ್ಯದಂಚಿನ ನೂರಾರು ಎಕರೆ ಭತ್ತದ ಗದ್ದೆಗಳ ಕೃಷಿ ಹಾನಿಗೀಡಾಗಿದೆ. ಕೆಲವು ಕಡೆ ತುಳಿದು ಹಾಳು ಮಾಡಿದ್ದರೆ ಮತ್ತೆ ಕೆಲವು ಕಡೆ ಬುಡ ಸಮೇತ ಕಿತ್ತು ಹಾಕಿವೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತ ಕೃಷಿ ನಾಶವಾಗಿದೆ ಎಂದು ಕೃಷಿಕ ಇಟೀರ ಪೊನ್ನಪ್ಪ ನೋವು ತೋಡಿಕೊಂಡಿದ್ದಾರೆ.
ಈ ಬಾರಿ ಉತ್ತಮ ಮಳೆಗೆ ಭತ್ತದ ಕೃಷಿ ಸಮೃದ್ಧಿಯಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿತ್ತು. ಒಮ್ಮೆಲೆ ದಾಳಿ ನಡಸಿರುವ ಕಾಡಾನೆ ಹಿಂಡು ಒಂದೇ ರಾತ್ರಿಗೆ ಭತ್ತದ ಬಯಲನ್ನು ಹೆಸರಿಲ್ಲದಂತೆ ಮಾಡಿವೆ. ಕಾರ್ಮಿಕರ ಕೊರತೆ ಮತ್ತು ಅತಿಯಾದ ಕೂಲಿ, ಹವಾಮಾನ ವೈಪರೀತ್ಯದ ನಡುವೆ ಕಷ್ಟುಪಟ್ಟು ಮಾಡಿದ್ದ ಕೃಷಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಷ್ಟಪಟ್ಟು ಮಾಡಿದ್ದ ಕೃಷಿ ಕೈಗೆ ಬರಲಿಲ್ಲವಲ್ಲ ಎಂಬ ಸಂಕಟ ಕಾಡುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.
ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಅವರಿಂದ ಸ್ಪಂದನ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. - ಎನ್.ಎನ್. ದಿನೇಶ್.