*ಸಿದ್ದಾಪುರ, ಅ. 15: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು, ಚೆಟ್ಟಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನು, ಕೆರೆ ಮತ್ತು ಸ್ಮಶಾನದ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿರುವ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಜಿಲ್ಲಾಡಳಿತ ತಕ್ಷಣ ಒತ್ತುವರಿ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಕೂಡ್ಲೂರು, ಚೆಟ್ಟಳ್ಳಿಯ ಸರ್ವೆ ಸಂಖ್ಯೆ 16/6 ರಲ್ಲಿ 29 ಎಕರೆ ಸರ್ಕಾರಿ ಜಾಗವಿದ್ದು, ಇಂದು ಜಾಗ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ಮುಕ್ಕಾಲು ಎಕರೆ ಜಾಗದಲ್ಲಿ 15 ಬಡ ಕುಟುಂಬಗಳು ಆಶ್ರಯ ಪಡೆದಿದ್ದು, ಉಳಿದ ಜಮೀನು ನಾಪತ್ತೆಯಾಗಿದೆ.

ಸರ್ವೆ ಸಂಖ್ಯೆ 142/3 ರಲ್ಲಿ ಒಂದು ಎಕರೆ ಜಾಗ ಸ್ಮಶಾನಕ್ಕೆ ಮೀಸಲಿಟ್ಟಿರುವ ಬಗ್ಗೆ ಆರ್‍ಟಿಸಿ ಇದೆ. ಆದರೆ ಸ್ವಲ್ಪವೂ ಜಾಗ ಬಿಡದೆ ಒತ್ತುವರಿ ಮಾಡಲಾಗಿದೆ. ಇದೇ ಪ್ರದೇಶದಲ್ಲಿದ್ದ ಕೆರೆಯ ಜಾಗವನ್ನು ಕೂಡ ಕಬಳಿಸಲಾಗಿದೆ. ಸರ್ವೆ ಸಂಖ್ಯೆ 28 ರಲ್ಲಿ 6.50 ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಸೋಮವಾರಪೇಟೆ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಗ್ರಾ.ಪಂ. ಮಾಜಿ ಸದಸ್ಯರುಗಳಾದ ಕಂಠಿ ಕಾರ್ಯಪ್ಪ, ರವಿ, ಗ್ರಾಮಸ್ಥರಾದ ದಯಾನಂದ, ಯದುಕುಮಾರ್ ಮತ್ತಿತರರು ಆರೋಪಿಸಿದ್ದಾರೆ.

ಸರ್ವೆ ಕಾರ್ಯಕ್ಕಾಗಿ ಒತ್ತಾಯಿಸಿದ ಪರಿಣಾಮ ಇಲ್ಲಿಯವರೆಗೆ ಒಟ್ಟು ಐದು ಬಾರಿ ಸರ್ವೆ ಮಾಡಲಾಗಿದೆ. ಆದರೆ ಒತ್ತುವರಿಯನ್ನು ತೆರವುಗೊಳಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆರೆ ಮತ್ತು ಸ್ಮಶಾನದ ಜಾಗವನ್ನು ಸಂರಕ್ಷಿಸುವ ಕಾರ್ಯವನ್ನು ಕೂಡ ಕೈಗೊಂಡಿಲ್ಲ. ಆದ್ದರಿಂದ ಕಂದಾಯ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ ಮತ್ತು ಒತ್ತುವರಿ ತೆರವಿಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಮಣಿ ಉತ್ತಪ್ಪ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

- ಅಂಚೆಮನೆ ಸುಧಿ