ಸೋಮವಾರಪೇಟೆ, ಅ. 15: ಸಮೀಪದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಲ್ಲಳ್ಳಿ ಜಲಪಾತ 6 ತಿಂಗಳ ನಂತರ ಪ್ರವಾಸಿಗರಿಗೆ ಮುಕ್ತಗೊಂಡಿದೆ. ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಪ್ರಾರಂಭವಾದ ದಿನಗಳಲ್ಲಿ, ದೇಶದಾದ್ಯಂತ ಲಾಕ್ಡೌನ್ ಘೋಷಣೆಯಾದ ಸಂದರ್ಭ ಮುಚ್ಚಲ್ಪಟ್ಟಿದ್ದ ಮಲ್ಲಳ್ಳಿ ಜಲಪಾತದ ಪ್ರವೇಶದ್ವಾರ, ಬರೋಬ್ಬರಿ 6 ತಿಂಗಳ ತರುವಾಯ ಪ್ರವಾಸಿಗರಿಗೆ ಮುಕ್ತಗೊಂಡಿದೆ.
ಜಿಲ್ಲೆಯಲ್ಲಿನ ಹಲವಷ್ಟು ಪ್ರವಾಸಿ ತಾಣಗಳು ಕಳೆದೊಂದು ತಿಂಗಳಿ ನಿಂದಲೇ ಪ್ರವಾಸಿಗರಿಗೆ ಮುಕ್ತವಾಗಿದ್ದರೆ, ಮಲ್ಲಳ್ಳಿ ಜಲಪಾತದ ಪ್ರವೇಶ ಶುಲ್ಕದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಮತ್ತು ಸ್ಥಳಿಯಾಡಳಿತದ ನಡುವೆ ಶುಲ್ಕದ ವಿನಾಯಿತಿಯಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ಮಲ್ಲಳ್ಳಿ ಜಲಪಾತದ ಪ್ರವೇಶ ದ್ವಾರ ಬಂದ್ ಆಗಿತ್ತು. ಇದರಿಂದಾಗಿ ಪ್ರವಾಸಿಗರಿಗೆ ಮಲ್ಲಳ್ಳಿ ಜಲಪಾತದ ವೀಕ್ಷಣೆಗೆ ಅನಾನುಕೂಲವಾಗಿತ್ತು.
ಆದರೂ ಕೆಲವರು ಪಕ್ಕದ ತೋಟದೊಳಗಿನಿಂದ ಕಾಲುದಾರಿಯಲ್ಲಿ ತೆರಳಿ ಜಲಪಾತದ ಸೊಬಗನ್ನು ಸವಿಯುತ್ತಿದ್ದರು. ಇದೀಗ ಪ್ರವೇಶ ದ್ವಾರಕ್ಕೆ ಅಳವಡಿಸಿದ್ದ ಬಾಗಿಲನ್ನು ತೆರೆಯಲಾಗಿದ್ದು, ಜಲಪಾತಕ್ಕೆ ಪ್ರವಾಸಿಗರು ಮುಕ್ತವಾಗಿ ತೆರಳಬಹುದಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಈ ಬಗ್ಗೆ ಕ್ರಮ ವಹಿಸಲಾಗಿದೆ. ಸ್ಥಳದಲ್ಲಿ ಪ್ರವಾಸಿ ಮಿತ್ರ ಸಿಬ್ಬಂದಿಗಳಿದ್ದು, ಪ್ರವಾಸಿಗರಿಗೆ ಕೊರೊನಾ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಸೌಂದರ್ಯದ ಖನಿ: ಹಚ್ಚಹಸಿರಿನ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ.., ಎರಡೂ ಬದಿಯಲ್ಲಿ ಬೆಟ್ಟ..,ನಡುವೆ ಹಾಲಿನ ಹೊಳೆಯಂತೆ ಹರಿಯುತ್ತಿರುವ ಜಲಧಾರೆಯ ವೈಭವ.., ಜುಳುಜುಳು ನಾದದೊಂದಿಗೆ ಕಣ್ಮನ ತಣಿಸುವ ಸೌಂದರ್ಯದ ಜಲಕನ್ಯೆ ಮಲ್ಲಳ್ಳಿ ಜಲಪಾತ ಮಳೆಗೆ ಮೈದಳೆದಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಈ ಹಿಂದೆ ಹೆಚ್ಚು ಮಳೆಯಾಗಿದ್ದು, ಈಗಲೂ ಸಾಧಾರಣ ಮಳೆ ಸುರಿಯುತ್ತಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಪರಿಣಾಮ ಮಲ್ಲಳ್ಳಿ ಜಲಪಾತ ಭೋರ್ಗರೆಯುತ್ತಿದ್ದು, ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕುತ್ತಿದೆ.
- ವಿಜಯ್