ಮಡಿಕೇರಿ, ಅ. 15: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಹಾಗೂ ಕರಗೋತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಹಲವಾರು ನಿರ್ಬಂಧಗಳೊಂದಿಗೆ ಆಚರಣೆ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ ಈ ನಿರ್ಬಂಧಗಳನ್ನು ಕೊಂಚ ಸಡಿಲಿಕೆ ಮಾಡುವಂತೆ ಮನವಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರನ್ನು ತಾ. 16 ರಂದು (ಇಂದು) ಭೇಟಿ ಮಾಡಲು ದಶಮಂಟಪ ಸಮಿತಿ ತೀರ್ಮಾನಿಸಿದೆ.
ನಗರದ ಚೌಡೇಶ್ವರಿ ಸಭಾಂಗಣದಲ್ಲಿ ದಶಮಂಟಪ ಸಮಿತಿ ಅಧ್ಯಕ್ಷ ಬಿ. ಗುರುರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಹತ್ತು ಮಂಟಪ ಸಮಿತಿಗಳ ಪ್ರಮುಖರು ಕರಗ ಉತ್ಸವ ಆರಂಭದಿಂದ ಕರಗಕ್ಕೆ ಮಹದೇವಪೇಟೆ ರಸ್ತೆಯಲ್ಲಿ ಸಾರ್ವಜನಿಕರು ಪೂಜೆ ಸಲ್ಲಿಸುವದು ವಾಡಿದೆ. ಇದಕ್ಕೆ ನಿರ್ಬಂಧ ಹೇರಿದರೆ ಪೂಜೆ ಸಲ್ಲಿಸಲು ಬರುವ ಭಕ್ತರನ್ನು ತಡೆಯುವದು ಹೇಗೆ ಎಂದು ಪ್ರಶ್ನಿಸಿದರು. ದಶಮಂಟಪ ಸಮಿತಿ ಅಧ್ಯಕ್ಷ ಗುರುರಾಜ್ ಹಾಗೂ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್ ಇವರುಗಳು ಕೊರೊನಾ ಹಿನ್ನೆಲೆಯಲ್ಲಿ ಯಾವದೇ ಅಪಾಯಗಳು ಸಂಭವಿಸಬಾರದು ಎಂಬ ಕಾರಣಕ್ಕಾಗಿ ಇಂತಹ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದರು.
ಪೇಟೆ ರಾಮಮಂದಿರ ದೇವಾಲಯ ಪ್ರತಿನಿಧಿ ಭರತ್ ಮಾತನಾಡಿ, ಸಾಂಕ್ರಾಮಿಕ ರೋಗಗಳ ನಿವಾರಣೆಗಾಗಿಯೇ ಆರಂಭವಾದ ಕರಗ ಉತ್ಸವಕ್ಕೆ ಸೂಕ್ತ ಪ್ರಾಮುಖ್ಯತೆ ಸಿಗಲೇಬೇಕು ಎಂದು ಅಭಿಪ್ರಾಯಿಸಿ ದರು. ದಂಡಿನ ಮಾರಿಯಮ್ಮ ದೇವಾಲಯದ ಕೆ.ಎಸ್. ರಮೇಶ್ ಮಾತನಾಡಿ, ಕಲಶ ಮೆರವಣಿಗೆ ದಿನ ರಾತ್ರಿ ಸಣ್ಣ ಪುಟ್ಟ ಲೈಟ್‍ಗಳನ್ನು ಬಳಸದೇ ಕಲಶ ಕೊಂಡೊಯ್ಯಬೇಕು ಎಂಬದಾದರೆ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕೋಟೆ ಮಾರಿಯಮ್ಮ ಪ್ರತಿನಿಧಿ ಸಂತೋಷ್ ನಾಗರಾಜ್ ಪ್ರತಿಭಾರಿ ವಿಜಯದಶಮಿಯಂದು ಬ್ರಾಹ್ಮೀ ಮುಹೂರ್ತದಲ್ಲಿ ಬನ್ನಿ ಕಡಿಯುವದು ಸಾಂಪ್ರದಾಯ. ಹೀಗಿರುವಾಗ ರಾತ್ರಿ 10 ಗಂಟೆಗೆ ಇದನ್ನು ಮಾಡಿ ಮುಗಿಸಬೇಕು ಎನ್ನುವದು ಎಷ್ಟು ಸರಿ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕೋಟೆ ಗಣಪತಿ ದೇವಾಲಯದ ಬಿ.ಎಂ. ರಾಜೇಶ್ ಮಾತನಾಡಿ, ಒಂದೊಂದು ಮಂಟಪದ ಜೊತೆ ಕೇವಲ ಹತ್ತು ಮಂದಿ ಮಾತ್ರ ಇರಬೇಕು ಎನ್ನುವದಾದರೆ ನೂರು - ಇನ್ನೂರು ಸದಸ್ಯರಲ್ಲಿ ಹತ್ತು ಮಂದಿಯನ್ನು ಆಯ್ಕೆ ಮಾಡುವದಾದರೂ ಹೇಗೆ. ಇದು ಸಮಿತಿಯೊಳಗೆ ಅಸಮಾಧಾನಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಿಸಿದರು. ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಪ್ರತಿನಿಧಿ ಮನು ಮಂಜುನಾಥ್, ಕೊರೊನಾವನ್ನು ನಿರ್ಲಕ್ಷಿಸುವಂತಿಲ್ಲ. ಜನರ ಜೀವ ಮುಖ್ಯ ಆದ್ದರಿಂದ ಕೊರೊನಾ ನಿಯಮದಡಿಯಲ್ಲಿಯೆ ಉತ್ಸವ ನಡೆಸುವದು ಒಳಿತು ಎಂದು ಹೇಳಿದರು. ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ರಂಜಿತ್ ಮಾತನಾಡಿ, ಕರಗ ಪೂಜೆ ವೇಳೆ ನಗರ ಪ್ರದಕ್ಷಿಣೆ ಮಾಡಲೇಬೇಕೆಂದು ವೃತಧಾರಿಗಳ ಮೂಲಕ ದೈವಶಕ್ತಿ ಇಚ್ಚಿಸಿದರೆ ಅದನ್ನು ನಿರ್ಲಕ್ಷಿಸಲು ಸಾಧ್ಯವೆ ಈ ಬಗ್ಗೆ ಚಿಂತಿಸಬೇಕಿದೆ ಎಂದರು.
ಕರವಲೆ ಭಗವತಿ ಪ್ರತಿನಿಧಿ ಕುಶ ಮಾತನಾಡಿ, ತಾ. 17 ಮತ್ತು 26 ರಂದು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಹಾಗಾದರೆ ಉಳಿದ ದಿನಗಳಲ್ಲಿ ನಗರದಲ್ಲಿ ಸಾವಿರಗಟ್ಟಲೆ ಪ್ರವಾಸಿಗರು ಇರುವದಿಲ್ಲವೆ ಹೀಗಿರುವಾಗ ಕಲಶದೊಂದಿಗೆ ಹತ್ತು ಮಂದಿ ಮಾತ್ರ ಹೋಗಬೇಕು ಎಂಬದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕರಗ ಸಮಿತಿಯ ಹರೀಶ್ ಅವರು ಮಾತನಾಡಿ ರಸ್ತೆ ಬದಿಯಲ್ಲಿ ನಿಂತು ಭಕ್ತರು ಕರಗ ವೀಕ್ಷಣೆ ಮಾಡಬಾರದು, ಪೂಜೆ ನೀಡಬಾರದು ಎಂದರೆ ಕರಗಕ್ಕೆ ಬರುವ ಪೂಜೆಯನ್ನು ಬೇಡ ಎನ್ನಲಾದೀತೆ ಎಂದು ಪ್ರಶ್ನಿಸಿದರು. ಜಿ.ವಿ. ರವಿಕುಮಾರ್ ಮಾತನಾಡಿ ಮಹದೇವಪೇಟೆ ರಸ್ತೆಯಲ್ಲಿ ಕರಗಗಳು ಪೂಜೆ ಸ್ವೀಕರಿಸುವ ವ್ಯವಸ್ಥೆ ಆಗಬೇಕೆಂದರು.
ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ - ವಿಚರ್ಚೆ ನಡೆದು ಕೊನೆಗೆ ತಾ. 16 ರಂದು (ಇಂದು) ಜಿಲ್ಲಾಧಿಕಾರಿಯವರನ್ನು ದಶಮಂಟಪ ಸಮಿತಿಯಿಂದ ಭೇಟಿ ಮಾಡಿ, ವಿಧಿಸಲಾಗಿರುವ ನಿರ್ಬಂಧದಲ್ಲಿ ಕೊಂಚ ವಿನಾಯಿತಿ ನೀಡಲು ಮನವಿ ಮಾಡಲು ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಚೌಡೇಶ್ವರಿ ದಸರಾ ಸಮಿತಿ ಅಧ್ಯಕ್ಷ ಡಿ.ಪಿ. ನಾಗೇಶ್, ಸಲಹೆಗಾರ ಕೆ.ಪಿ. ರಾಜು, ಗೌರವಾಧ್ಯಕ್ಷ ಜಯರಾಂ ಆಚಾರ್ಯ, ಮಾಜಿ ಅಧ್ಯಕ್ಷ ಗಿರೀಶ್, ಮಹೇಶ್ ಇದ್ದರು.