*ಗೋಣಿಕೊಪ್ಪಲು, ಅ. 15 : ಮತ್ತಿಗೋಡು ಸಾಕಾನೆ ಶಿಬಿರದ ರಾಜೇಂದ್ರ (65) ಎಂಬ ಸಾಕಾನೆ ಕಾಡಾನೆ ಧಾಳಿಯಿಂದ ಮೃತಪಟ್ಟಿದೆ.
ಸಾಕಾನೆ ಯನ್ನು 13 ರ ಸಂಜೆ ಶಿಬಿರದಲ್ಲಿ ಆಹಾರ ನೀಡಿ ರಾತ್ರಿ ಇನ್ನಷ್ಟು ಆಹಾರಕ್ಕಾಗಿ ಕಾಡಿಗೆ ಬಿಡಲಾಗಿತ್ತು. ತಾ. 14 ರ ಬೆಳಿಗ್ಗೆ ಆನೆಯನ್ನು ಶಿಬಿರಕ್ಕೆ ಕರೆ ತರಲು ಮಾವುತ ಮತ್ತು ಕಾವಾಡಿ ತೆರಳಿದಾಗ ಕಾಡಾನೆಯೊಂದಿಗೆ ಕಾದಾಟ ನಡೆಸಿದ್ದ ಸಾಕಾನೆಯ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು.
ಗಾಯಗೊಂಡ ಸಾಕಾನೆಯನ್ನು ಶಿಬಿರಕ್ಕೆ ಕರೆ ತಂದು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ತೀವ್ರ ಅಸ್ವಸ್ಥಗೊಂಡ ಆನೆ ತಾ. 15 ರ ಬೆಳಿಗ್ಗೆ ಮೃತಪಟ್ಟಿತು ಎಂದು ಶಿಬಿರದ ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್ ತಿಳಿಸಿದರು.
1990ರಲ್ಲಿ ಸೋಮವಾರಪೇಟೆ ವಲಯದ ಯಡವನಾಡು ಅರಣ್ಯದಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು. 30 ವರ್ಷಗಳ ಕಾಲ ಶಿಬಿರದಲ್ಲಿದ್ದ ಆನೆ ಅಭಿಮನ್ಯುವನ್ನು ಬಿಟ್ಟರೆ ಇತರ ಆನೆಗಳಿಗೆ ನಾಯಕನಂತಿತ್ತು ಎಂದು ಶಿಬಿರದ ಮಾವುತರು ಮರುಕ ವ್ಯಕ್ತಪಡಿಸಿದರು.
ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಮುಜಿಬ್ ರೆಹಮಾನ್ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಡಿ.ಮಹೇಶ್ ಕುಮಾರ್, ಹುಣಸೂರು ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್,ವನ್ಯಜೀವಿ ಪರಿಪಾಲಕ ಬೋಸ್ ಮಾದಪ್ಪ, ವನ್ಯ ಜೀವಿ ಮಂಡಳಿ ಸದಸ್ಯ ಸುಬ್ರು ಹಾಜರಿದ್ದರು. ಮೈಸೂರು, ವೀರಾಜಪೇಟೆ ಕಣ್ಣಾನೂರು ರಾಜ್ಯ ಹೆದ್ದಾರಿಯಲ್ಲಿರುವ ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳು ಮತ್ತು ಮಾವುತರಿಗೆ ರಕ್ಷಣೆಯಿಲ್ಲದಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಎರಡು ವರ್ಷಗಳ ಹಿಂದೆ ಕೇರಳದ ಖಾಸಗಿ ಬಸ್, ರಂಗ ಎಂಬ ಸಾಕಾನೆಗೆ ಡಿಕ್ಕಿ ಹೊಡೆದು ಅದು ಸ್ಥಳದಲ್ಲಿಯೇ ಮೃತ ಪಟ್ಟಿತ್ತು. 6 ತಿಂಗಳ ಹಿಂದೆ ಆನೆಯನ್ನು ಕಾಡಿಗೆ ಬಿಡಲು ಮಾವುತ ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನವೊಂದು ಡಿಕ್ಕಿಯಾಗಿ ಆತನೂ ಮೃತ ಪಟ್ಟಿದ್ದ. ಇದೀಗ ರಾಜೇಂದ್ರ ಎಂಬ ಆನೆ, ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ಆನೆಗಳಿಗೆ ರಕ್ಷಣೆಯೇ ಇಲ್ಲದಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
-ಎನ್.ಎನ್.ದಿನೇಶ್