ಮಡಿಕೇರಿ, ಅ. 15: ರಾಜ್ಯದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರಕಾರ ಕಳೆದ ತಾ. 8 ರಂದು ಮೀಸಲಾತಿ ನಿಗದಿಪಡಿಸಿ ಹೊರಡಿಸಿದ ಆದೇಶಕ್ಕೆ ರಾಜ್ಯ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ.ನ್ಯಾಯಾಲಯದ ಮುಂದಿನ ಆದೇಶದವರೆಗೆ ಈ ತಡೆಯಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೆ, ಈ ಸಂಬಂಧ ಹಿರಿಯ ನ್ಯಾಯವಾದಿಗಳಾದ ಪಣೀಂದ್ರ, ಎ.ಎಸ್. ಪೊನ್ನಣ್ಣ, ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿಣ್ಣಪ್ಪ ಅವರುಗಳನ್ನೊಳಗೊಂಡ ಸಮಿತಿ ರಚಿಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿದಂತೆ ಎರಡು ವಾರಗಳೊಳಗಾಗಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.ಈ ಬಗ್ಗೆ ತಾ. 22 ರಂದು ವಿಚಾರಣೆ ನಡೆಸುವದಾಗಿ ತಿಳಿಸಿದೆ. ಸರಕಾರದ ತಾ. 8ರ ಆದೇಶವನ್ನು ಪ್ರಶ್ನಿಸಿ ಹಾಸನ ನಗರಸಭಾ ಸದಸ್ಯ ಹೆಚ್.ವಿ. ಚಂದ್ರೇಗೌಡ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.