ಕೂಡಿಗೆ, ಅ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಹಾರಂಗಿ ಮುಖ್ಯ ನಾಲೆಯ ಸೇತುವೆಯ ಬಳಿ ಮಹಿಳೆಯೊಬ್ಬರು ಕಾಲು ಜಾರಿ ನಾಲೆಗೆ ಬಿದ್ದಿದ್ದು, ನೀರಿನಲ್ಲಿ ಮುಳುಗುತ್ತಿದ್ದುದನ್ನು ನೋಡಿದ ಆಟೋ ಚಾಲಕ ರಕ್ಷಣೆ ಮಾಡಿದ ಪ್ರಸಂಗ ನಡೆದಿದೆ.
ಬ್ಯಾಡಗೊಟ್ಟ ಗ್ರಾಮದ ಪುನರ್ವಸತಿ ಕೇಂದ್ರದ ಮಹಿಳೆ ಹಾರಂಗಿ ಸೇತುವೆಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಎದುರಿನಿಂದ ಕಲ್ಲು ತುಂಬಿದ ಲಾರಿ ಸೇತುವೆಯ ಹತ್ತಿರ ಬಂದಾಗ ಸೇತುವೆಯ ತಡೆಗೋಡೆ ಸರಿ ಇಲ್ಲದ ಕಾರಣದಿಂದ ಮಹಿಳೆ ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ಅದೇ ಮಾರ್ಗವಾಗಿ ಸೀಗೆಹೊಸೂರು ಗ್ರಾಮಕ್ಕೆ ಬಾಡಿಗೆಗೆ ಹೋಗುತ್ತಿದ್ದ ಆಟೋ ಚಾಲಕ ಗಮನಿಸಿ ತಕ್ಷಣ ನಾಲೆಗೆ ಹಾರಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಕಾಲು ಜಾರಿ ಬಿದ್ದ ಮಹಿಳೆ ಮಲ್ಲಿಗೆ ಎಂಬಾಕೆಯನ್ನು ಈಜುಗಾರನಾದ ಆಟೋಚಾಲಕ ಅರುಣ್ ನಾಲೆಗೆ ಇಳಿದು ಅವರನ್ನು ರಕ್ಷಣೆ ಮಾಡಿದ್ದಾರೆ.