ಭಾಗಮಂಡಲ, ಅ. 15: ತಲಕಾವೇರಿ-ಭಗಂಡೇಶ್ವರ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಜಾಗೃತಿ ಫಲಕ ಗ್ರೀನ್ ಸಿಟಿ ಫೋರಂನಿಂದ ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಗುರುವಾರ ಹಸ್ತಾಂತರಿಸಲಾಯಿತು.
ಮಾಸ್ಕ್ ಧರಿಸಿ, ಕೋವಿಡ್- 19 ನಿಯಮ ಪಾಲಿಸಿ, ಇದು ಕಾವೇರಿ ಮಾತೆಯ ಪುಣ್ಯಕ್ಷೇತ್ರ. ವಸ್ತ್ರ ಸಂಹಿತೆಯನ್ನು ಕಡ್ಡಾಯ ಪಾಲಿಸಿ.., ಇದು ಪ್ಲಾಸ್ಟಿಕ್ ನಿಷೇಧಿತ ಪ್ರದೇಶ. ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ ದಂಡ ವಿಧಿಸಲಾಗುವುದು.., ಪ್ರದೇಶದ ಸ್ವಚ್ಛತೆಯನ್ನು ಕಾಪಾಡಿ.. ಎಂದು ಫಲಕದಲ್ಲಿ ಜಾಗೃತಿ ಸಂದೇಶ ಅಳವಡಿಸಲಾಗಿದೆ. ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಮಾಲೀಕತ್ವದ ಇಬ್ನಿ ಸ್ಪ್ರಿಂಗ್ಸ್ ಕಾಟೆಜ್ಸ್ ವತಿಯಿಂದ ಜಾಗೃತಿ ಫಲಕ ಪ್ರಾಯೋಜಿಸಲಾಗಿದೆ.
ಜಾಗೃತಿ ಫಲಕವನ್ನು ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರಿಗೆ ಭಗಂಡೇಶ್ವರ ದೇವಾಲಯದಲ್ಲಿ ಹಸ್ತಾಂತರಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆದಂಬಾಡಿ ರಮೇಶ್, ನಿಡ್ಯಮಲೆ ಮೀನಾಕ್ಷಿ, ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ ಇದ್ದರು.