ವೀರಾಜಪೇಟೆ, ಅ. 15: ರಾಜ್ಯ ಸರ್ಕಾರ ಹೊಸದಾಗಿ ರಚನೆ ಮಾಡಿರುವ ಪೊನ್ನಂಪೇಟೆ ತಾಲೂಕಿನ ಆರಂಭ ವಿಳಂಬವಾಗುತ್ತಿದ್ದು ತಾಲೂಕು ರಚನೆಯ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಿ ಹೊಸ ತಾಲೂಕನ್ನು ಉದ್ಘಾಟಿಸುವಂತೆ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿ ಮಂದಯ್ಯ ಇಂದು ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯ ಸರಕಾರ ಈಗಾಗಲೇ ಪೊನ್ನಂಪೇಟೆ ತಾಲೂಕು ರಚನೆ ಮಾಡಲು ಆದೇಶಿಸಿ ರಾಜ್ಯಪತ್ರ ಹೊರಡಿಸಿದೆ. ಹೊಸ ಪೊನ್ನಂಪೇಟೆ ತಾಲೂಕು ಉದ್ಘಾಟನೆಗಾಗಿ ಪೊನ್ನಂಪೇಟೆ ವಿಭಾಗದ ಸಾರ್ವಜನಿಕರು ಕಾಯುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಗ್ರಾಮ ಪಂಚಾಯಿತಿಯ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡರೆ ಪೊನ್ನಂಪೇಟೆ ತಾಲೂಕಿನ ಆರಂಭ ಇನ್ನಷ್ಟು ವಿಳಂಬವಾಗಲಿದೆ. ತಾ. 25 ರೊಳಗೆ ಹೊಸ ತಾಲೂಕು ಆರಂಭಗೊಂಡರೆ ಸರಕಾರಕ್ಕೆ ನಾವುಗಳು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ. ಶಾಸಕರು ಪತ್ರ ನೀಡಿದರೆ ಹಿತರಕ್ಷಣಾ ಸಮಿತಿ ಮೂಲಕ ಬೆಂಗಳೂರಿಗೆ ತೆರಳಿ ಸಂಬಂಧಪಟ್ಟವರನ್ನು ಭೇಟಿ ಮಾಡಿ ಪೊನ್ನಂಪೇಟೆ ತಾಲೂಕಿನ ಆರಂಭಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಿಕೊಳ್ಳಲಾಗುವುದು. ಕೋವಿಡ್-19ರಂತೆ ಸರಕಾರದ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಕಾರ್ಯಾಧ್ಯಕ್ಷ ಬಾಚಿರ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್, ನಿರ್ದೇಶಕ ಚೊಟ್ಟೆಯಂಡಮಾಡ ವಿಶ್ವನಾಥ್ ಉಪಸ್ಥಿತರಿದ್ದರು.