ಕೂಡಿಗೆ, ಅ. 15: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಹೆಗ್ಗಡಹಳ್ಳಿ ನಲ್ಲಿಹುದಕೇರಿ ಗ್ರಾಮಗಳಲ್ಲಿ ಈಗಾಗಲೇ ನಾಟಿ ಮಾಡಿದ ಭತ್ತದ ಗದ್ದೆಗಳಲ್ಲಿ ಬೆಂಕಿ ರೋಗ ಕಾಣಿಸಿಕೊಂಡು ಭತ್ತದ ಗದ್ದೆಗಳಲ್ಲಿ ನಾಟಿ ಮಾಡಿದ ಸಸಿಗಳು ಒಣಗುವುದರ ಜೊತೆಗೆ ಬೆಂದ ಹಾಗೆ ಕಾಣುತ್ತಿವೆ. ಅಲ್ಲದೆ ಭತ್ತದ ನಾಟಿ ಬೆಳೆಯನ್ನು ನಾಟಿ ಮಾಡಿ ಎರಡು ತಿಂಗಳುಗಳು ಕಳೆದರೂ ಭತ್ತದ ಬೆಳೆ ಬೆಳವಣಿಗೆ ಕಾಣದೆ ಈ ವ್ಯಾಪ್ತಿಯ ರೈತರು ಅತಂಕದಲ್ಲಿದ್ದಾರೆ.
ಕೃಷಿ ಇಲಾಖೆಯವರು ದೃಢೀಕರಿಸಿದ ಬಿತ್ತನೆ ಬೀಜವನ್ನು ಕೂಡಿಗೆ ಸಹಕಾರ ಸಂಘದ ಮೂಲಕ ವಿವಿಧ ಕಂಪೆನಿಯವರ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ಸಂಘವು ಪ್ರಿಯಾ 555 ಎಂಬ ಹೈಬ್ರೀಡ್ ತಳಿಯ ಬೀಜವನ್ನು ಸಹಕಾರ ಸಂಘದಲ್ಲಿ ದಾಸ್ತಾನು ಇಟ್ಟು ರೈತರಿಗೆ ಮಾರಾಟ ಮಾಡಲಾಗಿದೆ. ಆದರೆ ಈ ಬಿತ್ತನೆ ಬೀಜವನ್ನು ಪಡೆದು ರೈತರು ಸಸಿಮಡಿಗಳ ಮೂಲಕ ಬಿತ್ತನೆ ಮಾಡಿ ನಾಟಿ ಮಾಡಿದ್ದಾರೆ. ಆದರೆ ಈ ರೋಗ ಕಾಣಿಸಿಕೊಂಡು ಭಾರೀ ನಷ್ಟ ಎದುರಿಸುವ ಪ್ರಸಂಗಗಳು ಕಂಡುಬರುತ್ತವೆ.
ಈ ವ್ಯಾಪ್ತಿಯ ಕೋಳಿಬೈಲು ನಾಣಯ್ಯ, ಮಾದಪ್ಪ, ಪ್ರಕಾಶ್, ಹೆಗ್ಗಡ್ಡಹಳ್ಳಿ ಗ್ರಾಮದ ನಾಗೇಶ್, ನಲ್ಲಿಹುದುಕೇರಿ ಗ್ರಾಮದ ಕಿರಣ್ ಎಂಬವರ ನಾಟಿ ಗದ್ದೆಗಳಲ್ಲಿ ರೋಗ ಕಾಣಿಸಿಕೊಂಡು ಭತ್ತದ ಬೆಳೆಯು ಗರ್ಭಕಟ್ಟಿ ಕಾಳುಕಟ್ಟುವ ಸಂದರ್ಭ ಬೆಂಕಿ ರೋಗ ಕಾಣಿಸಿಕೊಂಡ ಹಿನ್ನೆಲೆ ಈ ಭಾಗದ ರೈತರು ಭಾರೀ ಅತಂಕ ಎದುರಿಸುವಂತಾಗಿದೆ.
ಈ ವಿಷಯದ ಬಗ್ಗೆ ಸಹಕಾರ ಸಂಘಕ್ಕೆ ಮತ್ತು ಕೃಷಿ ಇಲಾಖೆಗೆ ದೂರು ನೀಡಲಾಗಿದೆ. ಸಂಬಂಧಿಸಿದ ಭತ್ತದ ಬೀಜ ಕಂಪೆನಿಯವರು ಮತ್ತು ಕೃಷಿ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಬೆಂಕಿ ರೋಗವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬೀಜದ ಕಂಪೆನಿಯವರು ಸ್ಪಂದಿಸದಿದ್ದರೆ ಪ್ರತಿಭಟನೆಯ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಈ ವ್ಯಾಪ್ತಿಯ ರೈತರು ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ.