ಕಣಿವೆ, ಅ. 15: ಬಹುತೇಕ ಮಕ್ಕಳು ಹಾಗೂ ವಿದ್ಯಾರ್ಥಿಗಳ ಕೈಯಲ್ಲಿ ಈಗ ಕೊರೊನಾ ಕರುಣಿಸಿರುವ ಮತ್ತು ಬಯಸದೇ ಬಂದಂತಹ "ಮೊಬೈಲ್"ಗಳೆಂಬ ಮಾಯಾ ಪೆಟ್ಟಿಗೆಗಳಿವೆ. ಮೊಬೈಲ್ ಅನ್ನು ಒಳಿತಿಗೆ ಬಳಸುವಷ್ಟೇ ಪ್ರಮಾಣದಲ್ಲಿ ಕೆಡುಕಿಗೂ ಬಳಸಬಹುದಾಗಿದೆ. ಇದೀಗ ಶಾಲಾ-ಕಾಲೇಜುಗಳಲ್ಲಿ ಆನ್‍ಲೈನ್ ತರಗತಿಗಳ ಹೆಸರಲ್ಲಿ ಮಕ್ಕಳ ಕೈಗೆ ಕಡ್ಡಾಯವಾಗಿ ಮೊಬೈಲ್ ಬಂದಿವೆ. ಕೊರೊನಾ ಪೂರ್ವದಲ್ಲಿ ಮಕ್ಕಳು ಮೊಬೈಲ್ ಮುಟ್ಟಿದರೆ ಅಥವಾ ಬಳಸಿದರೆ ಅವರಿಗೆ ಪೋಷಕರಿಂದ ಶಿಕ್ಷೆಯಾಗುವ ಸಾಧ್ಯತೆ ಇತ್ತು. ಆದರೆ ಈಗ ಮೊಬೈಲ್ ಶಿಕ್ಷಣ ಕಡ್ಡಾಯವಾಗಿರುವ ಕಾರಣ ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್ ಬಳಸುವುದರಲ್ಲಿಯೇ ಕಳೆಯುತ್ತಿದ್ದಾರೆ. ಹಾಗಂತಾ ಎಲ್ಲಾ ಮಕ್ಕಳಿಗೂ ಇದು ಅನ್ವಯವೂ ಅಲ್ಲ. ಕೇವಲ ಕಲಿಕೆಗೆ ಮಾತ್ರ ಮೊಬೈಲ್‍ಗಳನ್ನು ಬಳಸುವ ಮಕ್ಕಳೂ ಇದ್ದಾರೆ. ಆದರೆ ಸಂಖ್ಯೆ ತೀರಾ ಕಡಿಮೆ.
ಇಂತಹ ಮಕ್ಕಳಿಗೆ ಉದಾಹರಣೆ ಯಾಗಿದ್ದಾಳೆ ಇಲ್ಲೊಬ್ಬಳು ವಿದ್ಯಾರ್ಥಿನಿ. ಕಲಿಕೆಯ ಸಮಯ ವನ್ನು ಹೊರತುಪಡಿಸಿ ಉಳಿದ ಸಮಯವನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾಳೆ ಎಂಬುದಕ್ಕೆ ಈ ವಿದ್ಯಾರ್ಥಿನಿ ಮಾದರಿಯಾಗಿದ್ದಾಳೆ.
ಕೊರೊನಾ ಕಳೆದ ಫೆಬ್ರವರಿ ಯಿಂದ ಈ ತನಕವೂ ಹಾಳು ಮಾಡದೇ ಉಳಿದ ರಂಗಗಳೇ ಇಲ್ಲ. ಒಂದು ಸಮೀಕ್ಷೆಯ ಪ್ರಕಾರ ಮೊಬೈಲ್ ಕರೆನ್ಸಿ ವ್ಯವಹಾರ ಹೊರತು ಪಡಿಸಿ ಎಲ್ಲಾ ರಂಗಗಳನ್ನು ಆರ್ಥಿಕವಾಗಿ ಅಲ್ಲೋಲ ಕಲ್ಲೋಲ ಗೊಳಿಸಿಬಿಟ್ಟಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನರ್ಸಿಂಗ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ಹಾಗೇ ಸುಮ್ಮನೆ ಕಾಲಹರಣ ಮಾಡುವುದಕ್ಕಿಂತ ಹಸುಗಳನ್ನು ಸಾಕಿ, ಹೆಚ್ಚಾಗಿ ಹಾಲು ಕರೆದು, ಆದಾಯ ವೃದ್ಧಿಗೆ ತನ್ನ ಬುದ್ಧಿ ಪ್ರಯೋಗಿ ಸುತ್ತಿದ್ದಾಳೆ ಗುಡ್ಡೆಹೊಸೂರು ಬಳಿಯ ಬಾಳುಗೋಡು ಗ್ರಾಮದ ಆಟೋ ಚಾಲಕ ಪೆÇನ್ನಪ್ಪ ಹಾಗೂ ಹೇಮಲತಾ ದಂಪತಿಗಳ ಪುತ್ರಿ ಭೂಮಿಕಾ. ತನ್ನ ಮನೆಯಲ್ಲಿನ ಬಡತನವನ್ನು ಮೆಟ್ಟಿ ನಿಲ್ಲಲು ತಾಯಿಯ ಜೊತೆ ಹಸುಗಳನ್ನು ಆರೈಕೆ ಮಾಡುತ್ತ, ಅವುಗಳನ್ನು ಹುಲುಸಾದ ಹುಲ್ಲು ಬೆಳೆದಲ್ಲಿ ಒಯ್ದು ಹಗ್ಗವನ್ನು ಕೈಯಲ್ಲೇ ಹಿಡಿದು ಚೆನ್ನಾಗಿ ಹೊಟ್ಟೆ ತುಂಬಾ ಮೇಯಿಸಿಕೊಂಡು ಮನೆಗೆ ಹಸುವನ್ನು ಕರೆತರುತ್ತಾಳೆ. ಮನೆಯಲ್ಲಿ ತಾನೇ ಹಾಲನ್ನು ಹಿಂಡಿ ಗುಡ್ಡೆಹೊಸೂರು ಹಾಲಿನ ಡೈರಿಗೆ ಹಾಕುತ್ತಿದ್ದಾಳೆ. ಹಸುಗೆ ಹುಲ್ಲು ಹಾಕಿದರಲ್ಲವೇ ಅದು ಹಾಲು ಕೊಡೋದು ಎನ್ನುವ ಈಕೆ, ಹಗಲಲ್ಲಿ ಹಸುವನ್ನು ಮೇಯಿಸಿ ರಾತ್ರಿ ಅದು ತಿನ್ನಲೂ ಹುಲ್ಲು ತರುತ್ತಾಳೆ. ಇದೀಗ ಈಕೆಯ ಪರಿಶ್ರಮದಿಂದ ಎರಡು ನಾಡು ಜಾತಿಯ ಹಸುಗಳು ತಲಾ ಐದು ಲೀಟರ್ ಹಾಲು ಕೊಡುತ್ತಿವೆ ಎನ್ನುತ್ತಾರೆ ಈ ವಿದ್ಯಾರ್ಥಿನಿಯ ತಾಯಿ ಹೇಮಲತಾ.
ಮಕ್ಕಳನ್ನು ಕೇವಲ ಓದಿಸಿದರೆ ಸಾಲದು. ಮಕ್ಕಳಿಗೆ ಕುಟುಂಬದ ಪ್ರತಿಯೊಂದು ಜವಾಬ್ದಾರಿಗಳ ಅರಿವಿರಬೇಕು. ಕಷ್ಟ ಸಂಕೋಲೆಗಳನ್ನು ಜಯಿಸುವ ಸಾಮಥ್ರ್ಯವಿರಬೇಕು. ಪಾಲಕರಾದ ನಾವುಗಳು ಮಕ್ಕಳನ್ನು ಸುಖವಾಗಿ ಸಾಕಿದರೆ ಭವಿಷ್ಯದಲ್ಲಿ ಅವರು ಸೋಮಾರಿಗಳಾಗುತ್ತಾರೆ. ಜೊತೆಗೆ ಹಳ್ಳಿಗಳ ಬದುಕು ಬವಣೆಗಳೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಸಮರ್ಥವಾದ ಹಾಗು ಸಮೃದ್ಧವಾದ ಜೀವನ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳುವ ಈಕೆಯ ತಾಯಿ ಹೇಮಲತಾ, ನನ್ನ ಎರಡೂ ಹೆಣ್ಣು ಮಕ್ಕಳಿಗೂ ಓದಿನ ಜೊತೆ ಗ್ರಾಮೀಣ ಬದುಕಿನ ಅರಿವನ್ನು ಮೂಡಿಸುತ್ತಿದ್ದೇನೆ ಎನ್ನುತ್ತಾರೆ. ಧರ್ಮಸ್ಥಳ ಗ್ರಾಮೀಣ ಯೋಜನೆಗಳು ಪ್ರತೀ ಹಳ್ಳಿ ಹಳ್ಳಿಗಳಿಗೆ ಕಾಲಿಟ್ಟ ಬಳಿಕ ಬಹಳಷ್ಟು ಜನ ಹಸುಗಳನ್ನು ಖರೀದಿಸಿ ಹೈನೋದ್ಯಮ ಮಾಡುತ್ತಿದ್ದಾರೆ. ಅದರಲ್ಲೂ ಹೆಂಗಸರ ಪಾತ್ರ ಹೈನುಗಾರಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಹೀಗಿರುವಾಗ ಮಕ್ಕಳು ಹೈನುಗಾರಿಕೆಯನ್ನು ಅರಿತರೆ ಭವಿಷ್ಯದಲ್ಲಿ ಜೀವನ ಸಾಗಿಸಲು ಇದೂ ಕೂಡ ದಾರಿದೀವಿಗೆಯಲ್ಲವೇ ಬಿಡಿ ಸಾರ್ ಎನ್ನುತ್ತಾರೆ ಪಾಲಕಿ ಹೇಮಲತಾ.
ಇನ್ನು ವಿದ್ಯಾರ್ಥಿನಿ ಭೂಮಿಕಾ ಮಾತನಾಡಿ, ನಾನು ಸುಳ್ಯದಲ್ಲಿ ನರ್ಸಿಂಗ್ ಮಾಡುತ್ತಾ ಇದ್ದೆ. ಕೊರೊನಾ ಎಲ್ಲರಂತೆ ನಮ್ಮನ್ನು ಕೂಡ ಮನೆಗಟ್ಟಿದ ಮೇಲೆ ಮನೆಯಲ್ಲಿ ಕುಳಿತು ಏನು ಮಾಡೋದು ಹೇಳಿ. ನಮ್ಮ ಖರ್ಚು ವೆಚ್ಚಗಳನ್ನು ನಾವೇ ರಜೆಯಲ್ಲಿ ಹೊಂದಿಸಿಕೊಳ್ಳೋಣ ಎಂದು ಕೊಂಡು ಅಮ್ಮನ ಜೊತೆ ನಾನು ಕೂಡ ಹಸುಗಳನ್ನು ಮೇಯಿಸಲು, ಅವುಗಳಿಗೆ ಹುಲ್ಲು ಸೊಪ್ಪು ತರುವ ಅಭ್ಯಾಸ ಮಾಡಿಕೊಂಡೆ. ಮೊದಲು ಎರಡು ಲೀಟರ್ ಹಾಲು ಕೊಡುತ್ತಿದ್ದ ಹಸು ಈಗ ಐದು ಲೀಟರ್ ಕೊಡುತ್ತೆ. ಜೊತೆಗೆ ಹಸು ದಷ್ಟಪುಷ್ಟವಾಗಿಯೂ ಇದೆ. ಅಪ್ಪ ಆಟೋ ಓಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅದೂ ಕೂಡ ಸಂಪಾದನೆ ಕಡಿಮೆಯೇ. ಹಾಗಾಗಿ ಪಾಲಕರ ದುಡಿಮೆ ಹಾಗೂ ಶ್ರಮವನ್ನರಿತು ನಾನು ಕೂಡ ಸಮಯವನ್ನು ಹೀಗೆ ಬಳಕೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಭೂಮಿಕಾ. ಭೂಮಿಕಾಳ ರೀತಿ ಗ್ರಾಮೀಣ ಪ್ರದೇಶಗಳ ಇನ್ನೂ ಅನೇಕ ಮಕ್ಕಳು ಹೀಗೆ ಸ್ವಾವಲಂಬ ನೆಯ ದುಡಿಮೆಗೆ ಕೊರೊನಾ ರಜೆಯ ಸಮಯವನ್ನು ಬಳಸಿಕೊಳ್ಳಬೇಕಿದೆ.
- ಕೆ.ಎಸ್. ಮೂರ್ತಿ.