ಗೋಣಿಕೊಪ್ಪಲು, ಡಿ. 14: ದ.ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ದಿನಕ್ಕೊಂದರಂತೆ ಜಾನುವಾರು ಮೇಲೆ ಹುಲಿ ದಾಳಿ ನಡೆಸುತ್ತಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ. ಭಾನುವಾರ ಪೊನ್ನಪ್ಪಸಂತೆ ಸಮೀಪದ ಬೀಳೂರು ಗ್ರಾಮದ ನಸೀಮ್ ಸಾಬ್ ಎಂಬವರಿಗೆ ಸೇರಿದ್ದ ಹಸುವನ್ನು ಹುಲಿ ಕೊಂದು ಹಾಕಿದ್ದು ಮಾಂಸವನ್ನು ತಿಂದು ತೆರಳಿದೆ. ಕಳೆದ ಐದು ದಿನಗಳಿಂದಲೂ ದ.ಕೊಡಗಿನ ಬೆಸಗೂರು, ಮಲ್ಲೂರು ಭಾಗದಲ್ಲಿ ರೈತರ ಹಸುಗಳ ಮೇಲೆ ಹುಲಿ ದಾಳಿ ನಡೆಸುತ್ತಿದೆ. ಹುಲಿಯು ಈ ಭಾಗದಲ್ಲಿ ಸಂಚಾರ ನಡೆಸುತ್ತಿದ್ದು ರೈತರು ತಮ್ಮಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಹಾಗೂ ಮನೆಯ ಸಮೀಪ (ಮೊದಲ ಪುಟದಿಂದ) ಕಟ್ಟಿದ ಸ್ಥಳಕ್ಕೆ ಮುಂಜಾನೆ ವೇಳೆಯಲ್ಲಿ ಆಗಮಿಸಿ ಹಸುವನ್ನು ಕೊಲ್ಲುತ್ತಿದೆ.
ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳಾದ ದಿವಾಕರ್ ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿ ಸರ್ಕಾರದ ನಿಯಮದಂತೆ ಪರಿಹಾರ ನೀಡುವ ಭರವಸೆ ನೀಡಿದರು. ಸ್ಥಳದಲ್ಲಿ ಗ್ರಾಮಸ್ಥರು ಹಾಜರಿದ್ದರು. ದ. ಕೊಡಗಿನಲ್ಲಿ ನಿರಂತರ ಹುಲಿ ದಾಳಿಯಿಂದ ರೈತರ ಜಾನುವಾರುಗಳು ಮೃತಪಡುತ್ತಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಕಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದು ಸೋಮವಾರ ಹುಣಸೂರಿನ ಅರಣ್ಯ ಭವನದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.