ಶ್ರೀಮಂಗಲ, ಡಿ. 14: ಹಲವು ಸಮಯದಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೋಜಿಗಾಗಿ ಬಂದು ಗೇಟಿನ ಮುಖಾಂತರ ಒಳ ಪ್ರವೇಶಿಸಿ ಸಂರಕ್ಷಿತ ಪ್ರದೇಶಗಳಲ್ಲಿ ಯಾವುದೇ ಶುಲ್ಕ ಪಾವತಿಸದೇ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ನೆರೆ ರಾಜ್ಯದ ಕಡೆಯಿಂದ ಬರುವ ಪ್ರವಾಸಿಗರು ಯಾವುದೇ ಮಾರ್ಗ ಸೂಚಿಯನ್ನು ಪಾಲಿಸದೆ ಕುಟ್ಟ, ನಾಣಚ್ಚಿ ಗೇಟ್‍ನಿಂದ ಪ್ರವೇಶಿಸಿ ಯಾವುದೇ ಕಾರಣವಿಲ್ಲದೆ ವೀರನಹೊಸಹಳ್ಳಿ ಅಥವಾ ಮೇಟಿಕುಪ್ಪೆ ಗೇಟಿನಿಂದ ನಿರ್ಗಮಿಸಿ ಹುಣಸೂರು ಹಾಗೂ ಹೆಚ್‍ಡಿ ಕೋಟೆಯಲ್ಲಿ ಮದ್ಯಪಾನ ಮಾಡಿ ಅದೇ ಗೇಟ್‍ನಿಂದ ಪುನಃ ಹುಲಿ ಸಂರಕ್ಷಿತ ಪ್ರದೇಶವಾದ ನಾಗರಹೊಳೆಯ ಮುಖಾಂತರ ವಾಹನ ಚಲಾಯಿಸಿ ಮೋಜು ಮಾಡುತ್ತಿರುವ ದೃಶ್ಯ ಹೆಚ್ಚಾಗಿ ಕಂಡುಬರುತ್ತಿದೆ.ಈ ಹಿನ್ನೆಲೆ ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕೇಟೋಳಿರ ಚಂಗಪ್ಪ, ಉಪಾಧ್ಯಕ್ಷ ಕುಂಞಂಗಡ ಬೋಸ್ ಮಾದಪ್ಪ (ಮೊದಲ ಪುಟದಿಂದ) ಹಾಗೂ ಸಂಘದ ಸದಸ್ಯರ ಸಹಕಾರದೊಂದಿಗೆ ಪ್ರತ್ಯೇಕವಾಗಿ ಎಲ್ಲಾ ನಾಲ್ಕು ಭಾಗದ ಗೇಟ್‍ನಲ್ಲಿ ದೊಡ್ಡ ಮಾರ್ಗ ಸೂಚಿ ಫಲಕವನ್ನು ಅಳವಡಿಸಲಾಯಿತು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯದ್ವಾರವಾದ ನಾಣಚ್ಚಿಯಲ್ಲಿ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನವನ್ನು ವಾರದ ಶನಿವಾರ ಹಾಗೂ ಭಾನುವಾರ ನೀಡಲಾಯಿತು. ನಾಣಚ್ಚಿ ಗೇಟ್‍ನಿಂದ ನಾಗರಹೊಳೆ ಮುಖ್ಯ ಕಚೇರಿಯ ತನಕ ರಸ್ತೆಯ ಇಬ್ಬದಿಯಲ್ಲಿ ಪ್ರವಾಸಿಗರು ಬಿಸಾಕಿದ ಕಸ ಹಾಗೂ ಪ್ಲಾಸ್ಟಿಕ್‍ಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಚೇಂದಂಡ ಅಯ್ಯಪ್ಪ, ಪಾಲೇಕಂಡ ವಿಶಾಲ್, ಮಂಡೇಪಂಡ ಅಕ್ಷಯ್, ಕೊಟ್ಟಂಗಡ ಶಾಲಿನಿ, ಮುಕ್ಕಾಟೀರ ವಿವೇಕ್, ಕರ್ತಮಾಡ ವಿವೇಕ್ ಹಾಗೂ ಇತರರು ಪಾಲ್ಗೊಂಡಿದ್ದರು. ಅರಣ್ಯ ಇಲಾಖೆಯ ಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು.