ಮಡಿಕೇರಿ, ಡಿ. 14: ಕೇರಳದ ಇಂತಿಯಾಜ್ ಎಂಬಾತ ಕಳವು ಮಾಡಿ ಮಾರಾಟ ಮಾಡಿದ್ದ ಬೊಲೇರೋ ಕಾರನ್ನು ಖರೀದಿಸಿ ಅದಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಚಾಲನೆ ಮಾಡುತ್ತಿದ್ದ ಆರೋಪಿ ಕಲ್ಲುಗುಂಡಿಯ ನಿವಾಸಿ, ಮಡಿಕೇರಿಯ ಹೋಂಸ್ಟೇವೊಂದರಲ್ಲಿ ವ್ಯವಸ್ಥಾಪಕನಾಗಿದ್ದ ನಾರಾಯಣ ಎಂಬಾತನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಆತನೊಂದಿಗೆ ಸಹಕರಿಸಿದ ಸಂಪಾಜೆ ಚೆಂಬುವಿನ ಲಕ್ಷತ್ ಹಾಗೂ ಕಾಸರಗೋಡಿನ ಸಂದೀಪ್ ಎಂಬವರುಗಳನ್ನೂ ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಇಂತಿಯಾಜ್ ತಲೆಮರೆಸಿಕೊಂಡಿದ್ದಾನೆ. ಆರೋಪಿ ನಾರಾಯಣ ಮೈಸೂರಿನ ವಾಹನವೊಂದರ ನಂಬರ್ (ಕೆ.ಎ. 52 ಎಂ. 2559) ಅನ್ನು ಬೊಲೇರೋ ಕಾರಿಗೆ ಅಳವಡಿಸಿ ಬಳಕೆ ಮಾಡುತ್ತಿದ್ದ. ನಕಲಿ ನಂಬರ್ ಪ್ಲೇಟ್ ಬಳಸಿದ್ದ ಎಫ್. ಜೆಡ್. ಬೈಕ್ವೊಂದನ್ನು ಕೂಡ ನಾರಾಯಣನಿಂದ ವಶಪಡಿಸಿಕೊಳ್ಳಲಾಗಿದೆ.
ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣಾಧಿಕಾರಿ ಅಂತಿಮ, ಎಎಸ್ಐ ದಯಾನಂದ, ಅಪರಾಧ ಪತ್ತೆ ವಿಭಾಗದ ದಿನೇಶ್ ಕೆ.ಕೆ., ಶ್ರೀನಿವಾಸ್, ಪ್ರವೀಣ್ ಡಿ.ಕೆ., ನಾಗರಾಜ್ ಕಡಗಣ್ಣನವರ್, ಪ್ರಸನ್ನ ಇವರುಗಳು ಪಾಲ್ಗೊಂಡಿದ್ದರು.