ಮಡಿಕೇರಿ, ಡಿ. 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರಕಾರಿ ನೌಕರನ್ನಾಗಿ ಪರಿಗಣಿಸಿ ಆರನೇ ವೇತನ ಆಯೋಗದ ವೇತನ ನೀಡಬೇಕೆಂಬುದು ಸೇರಿದಂತೆ ವಿವಿಧ 10 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನಿಗಮದ ನೌಕರರು ಹಮ್ಮಿಕೊಂಡಿದ್ದ ಮುಷ್ಕರ ಅಂತ್ಯಗೊಂಡಿದ್ದು, ಸಂಜೆಯಿಂದಲೇ ಬಸ್ ಸಂಚಾರ ಆರಂಭಗೊಂಡಿದೆ.ಸರಕಾರ ನೌಕರರ ಬೇಡಿಕೆಗಳ ಪೈಕಿ ಒಂಭತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗಡುವಿನೊಂದಿಗೆ ಮುಷ್ಕರ ಹಿಂಪಡೆಯಲಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ಮೂರು ತಿಂಗಳ ಬಳಿಕ ಮತ್ತೆ ಮುಷ್ಕರ ಆರಂಭಿಸುವ ಎಚ್ಚರಿಕೆ ಸರಕಾರಕ್ಕೆ ನೀಡಲಾಗಿದೆ. ನಿರಂತರ ದುಡಿಯುವ ಸಾರಿಗೆ ನಿಗಮದ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ 6ನೇ ವೇತನಕ್ಕೆ ಶಿಫಾರಸು ಮಾಡಬೇಕು ಎಂಬದು ಸೇರಿದಂತೆ ಒಟ್ಟು ಹತ್ತು ಬೇಡಿಕೆಗಳನ್ನು ಮುಂದಿರಿಸಿ ಸಾರಿಗೆ ನಿಗಮದ ನೌಕರರು ಕಳೆದ ಐದು ದಿನಗಳಿಂದ ರಾಜ್ಯದಾದ್ಯಂತ ಮುಷ್ಕರ ಹೂಡಿದ್ದರು. ನೌಕರರ ಹೋರಾಟಕ್ಕೆ ರೈತಪರ ಸಂಘಟನೆಗಳು ಬೆಂಬಲ ನೀಡಿದ್ದವು.ಈ ಹಿನ್ನೆಲೆಯಲ್ಲಿ ಹೋರಾಟ ತೀವ್ರತೆ ಪಡೆದುಕೊಂಡಿತ್ತು. ಹೋರಾಟಗಾರ ಪ್ರಮುಖರು ಹಾಗೂ ಸರಕಾರದೊಂದಿಗೆ ನಡೆಸಿದ ಮಾತುಕತೆ, ಸಂದಾನ ಪ್ರಕ್ರಿಯೆ ಕೂಡ ಫಲಪ್ರದವಾಗದ ಹಿನ್ನೆಲೆಯಲ್ಲಿ ನೌಕರರು ಉಪವಾಸ ಸತ್ಯಾಗ್ರಹಕ್ಕೆ ಮುನ್ನಡಿಯಿಟ್ಟಿದ್ದರು. ಇಂದು ಪ್ರತಿಭಟನಾನಿರತರ ಪರವಾಗಿದ್ದ ಸಂಘಟನೆಗಳ ಪ್ರಮುಖರು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಚಿವರು ಒಟ್ಟು ಬೇಡಿಕೆಗಳ ಪೈಕಿ ಒಂಭತ್ತನ್ನು ಈಡೇರಿಸುವು ದಾಗಿಯೂ, ಸರಕಾರಿ ನೌಕರರಾಗಿ ಪರಿಗಣಿಸುವ ಬಗ್ಗೆ ಹಾಗೂ 6ನೇ ವೇತನದ ಆಯೋಗಕ್ಕೆ ಶಿಫಾರಸು ಮಾಡುವ ಬಗ್ಗೆ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಸಚಿವರು ನೀಡಿದ ಲಿಖಿತ ಭರವಸೆ ಪತ್ರವನ್ನು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮುಷ್ಕರ ನಿರತ ನೌಕರರಿಗೆ ನೀಡಿದ ಬಳಿಕ ಮುಷ್ಕರ ಹಿಂಪಡೆಯಲಾಯಿತು. ಆದರೂ ಮುಂದಿನ 3 ತಿಂಗಳ ಒಳಗಡೆ ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ತೀವ್ರ ಸ್ವರೂಪದ ಮುಷ್ಕರ ಹೂಡುವುದಾಗಿ ಗಡುವು ವಿಧಿಸಿ ಮುಷ್ಕರ ಹಿಂಪಡೆದಿದ್ದಾರೆ.
ಪ್ರಯಾಣಿಕರ ಪರದಾಟ : ಸಾರಿಗೆ ಬಸ್ ನೌಕರರ ಮುಷ್ಕರದಿಂದಾಗಿ ಬಸ್ ಸಂಚರಿಸದೆ ದೂರದೂರಿಗೆ ತೆರಳಬೇಕಾದ ಪ್ರಯಾಣಿಕರು ಕಳೆದ ಐದು ದಿನಗಳಿಂದಲೂ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಇಂದು ಬೇರೆ ಕೆಲವು ಜಿಲ್ಲೆಗಳ ಪೊಲೀಸ್ ಭದ್ರತೆಯೊಂದಿಗೆ ಬಸ್‍ಗಳು ಸಂಚರಿಸಲಿವೆ ಎಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಇಂದು ಹಲವಷ್ಟು ಮಂದಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆದರೆ ಬಸ್‍ಗಳೇ ಇಲ್ಲದ ಖಾಲಿ ನಿಲ್ದಾಣವನ್ನು ಕಂಡು ಕೆಲವರು ಹಿಂತಿರುಗಿದರೆ, ಇನ್ನು ಕೆಲವರು ಬಸ್ ಬರಬಹುದೆಂಬ ಆಶಾಭಾವನೆಯೊಂದಿಗೆ ಕಾಯುತ್ತಾ ಕುಳಿತ್ತಿದ್ದರು.
ಬಸ್‍ಗಳು ಸಂಚರಿಸುವುದಿಲ್ಲವೆಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಖಾಸಗಿ ಬಸ್‍ಗಳು ಸಾರಿಗೆ ಬಸ್ ನಿಲ್ದಾಣದ ಬಳಿ ಬಂದು ಮೈಸೂರು ಹಾಗೂ ಸುಳ್ಯ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯಲು ಅಣಿಯಾದವು. ಬಹಳಷ್ಟು ಮಂದಿ ಖಾಸಗಿ ಬಸ್ಸನ್ನೇರಿ ತೆರಳಿದರು. ಆದರೆ, ಗೋಣಿಕೊಪ್ಪದಲ್ಲಿ ರಸ್ತೆ ಕೆಲಸಕ್ಕೆಂದು ಬಂದಿದ್ದ ಹುಬ್ಬಳ್ಳಿಯ ಕಾರ್ಮಿಕ ಕುಟುಂಬ ಬಸ್ ಮುಷ್ಕರದ ಬಗ್ಗೆ ಅರಿವಿಲ್ಲದೆ ಮಡಿಕೇರಿಗೆ ಬಂದು ಸಿಲುಕಿಕೊಂಡು ಪರದಾಡುವಂತಾಯಿತು. ನಂತರದಲ್ಲಿ ಸ್ಥಳದಲ್ಲಿ ಸುದ್ದಿ ಮಾಡಲೆಂದು ತೆರಳಿದ್ದ ಮಾಧ್ಯಮದವರು ಆ ಕುಟುಂಬಕ್ಕೆ ಮಂಗಳೂರು ಹಾಗೂ ಮೈಸೂರಿಗೆ ಖಾಸಗಿ ಬಸ್‍ಗಳು ಇರುವುದನ್ನು ತಿಳಿಸಿ ಅಲ್ಲಿಂದ ರೈಲಿನಲ್ಲಿ ಪ್ರಯಾಣಿಸುವಂತೆ ಹೇಳಿದ ಮೇರೆಗೆ ಆ ಕುಟುಂಬ ಖಾಸಗಿ ಬಸ್‍ನಲ್ಲಿ ಪ್ರಯಾಣ ಬೆಳೆಸಿತು.
ಮಜ್ಜಿಗೆ-ಊಟ : ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದರೂ ಬಿಸಿಲ ಬೇಗೆ ಹಾಗೂ ಹಸಿವು ತಾಳಲಾರದ ನೌಕರರು ಮಧ್ಯಾಹ್ನ ವೇಳೆಗೆ ಮೊಸರು ತರಿಸಿ ಮಜ್ಜಿಗೆ ಮಾಡಿ ದಾಹ ತೀರಿಸಿಕೊಂಡರು. ನಂತರ ಅಡುಗೆ ಮಾಡಿ ಊಟ ಮಾಡಿದರು.
(ಮೊದಲ ಪುಟದಿಂದ) ಕುಶಾಲನಗರ: ರಾಜ್ಯದಾದ್ಯಂತ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರು ಹೂಡಿರುವ ಮುಷ್ಕರದಿಂದಾಗಿ ಕುಶಾಲನಗರ ಮೂಲಕ ಹಾದುಹೋಗುವ ಸಾರಿಗೆ ಬಸ್‍ಗಳು ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ಬಸ್‍ಗಳ ಮೂಲಕ ತೆರಳುತ್ತಿದ್ದ ದೃಶ್ಯ ಕಂಡುಬಂತು. ಮೈಸೂರು, ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಮಾತ್ರ ಯಾವುದೇ ವಾಹನಗಳಿಲ್ಲದೆ ಪರದಾಡಬೇಕಾಯಿತು. ಕುಶಾಲನಗರ ಬಸ್ ನಿಲ್ದಾಣದಲ್ಲಿ ಯಾವುದೇ ಬಸ್‍ಗಳಿಲ್ಲದೆ ನಿಲ್ದಾಣ ಬಿಕೋ ಎನ್ನುವಂತಾಗಿತ್ತು.
ಬಸ್ ಇಲ್ಲದೆ ಪರದಾಟ...!
ಗೋಣಿಕೊಪ್ಪಲು: ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕೆಎಸ್‍ಆರ್‍ಟಿಸಿ ಬಸ್ ಮುಷ್ಕರದಿಂದಾಗಿ ಪ್ರಯಾಣಿಕರು ಬಸ್ ಇಲ್ಲದೆ ಪರದಾಡುವಂತಾಗಿದ್ದು ಕೆಲವೆ ಕೆಲವು ಖಾಸಗಿ ಬಸ್ ಹಾಗೂ ಟ್ಯಾಕ್ಸಿಗಳನ್ನು ಅವಲಂಭಿಸಬೇಕಾದ ಅನಿವಾರ್ಯತೆ ಇಲ್ಲಿನ ಪ್ರಯಾಣಿಕರದ್ದಾಗಿತ್ತು.
ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಜನತೆ ಮೈಸೂರು ಹಾಗೂ ಬೆಂಗಳೂರಿಗೆ ತೆರಳಲು ಸರ್ಕಾರಿ ಬಸ್‍ಗಳನ್ನೆ ಅವಲಂಭಿಸಿದ್ದರು. ಗಡಿ ಭಾಗ ಕುಟ್ಟ ಹಾಗೂ ಕೇರಳ ಭಾಗದಿಂದ ಹೆಚ್ಚಾಗಿ ಜನರು ವಾಣಿಜ್ಯ ನಗರ ಗೋಣಿಕೊಪ್ಪಲುವಿಗೆ ಆಗಮಿಸಿ ಇಲ್ಲಿಂದ ದೂರದ ಊರುಗಳಿಗೆ ಸರ್ಕಾರಿ ಬಸ್‍ಗಳಲ್ಲಿ ತೆರಳುತ್ತಿದ್ದರು. ಮುಂಜಾನೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಸರ್ಕಾರಿ ಬಸ್‍ಗಳು ಸೇವೆ ನೀಡುತ್ತಿದ್ದವು.
ಮುಷ್ಕರದಿಂದಾಗಿ ಬಸ್‍ಗಳು ರಸ್ತೆಗೆ ಇಳಿಯದೇ ಇರುವುದರಿಂದ ಪ್ರಯಾಣಿಕರಿಗೆ ಅನ್ಯ ಮಾರ್ಗವಿಲ್ಲದೆ ದುಪ್ಪಟ್ಟು ದರ ನೀಡಿ ಸಮಯವಲ್ಲದ ಸಮಯದಲ್ಲಿ ಆಗಮಿಸುವ ಟ್ಯಾಕ್ಸಿ, ವ್ಯಾನ್, ಟೆಂಪೊ ಮುಂತಾದ ವಾಹನಗಳಲ್ಲಿ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು, ಸದಾ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಬಸ್ ಇಲ್ಲದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರಲಿಲ್ಲ.
ಖಾಸಗಿ ಬಸ್‍ಗಳಿಗೆ ಹೆಚ್ಚಿನ ಪ್ರಯಾಣಿಕರು
ಸೋಮವಾರಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಮುಷ್ಕರನಿರತರಾಗಿದ್ದ ಹಿನ್ನೆಲೆ ಸರ್ಕಾರಿ ಬಸ್‍ಗಳು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದವು.
ಪರಿಣಾಮ ಸಂತೆ ದಿನವಾದ ಸೋಮವಾರದಂದು ಖಾಸಗಿ ಬಸ್‍ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡುಬಂದರು. ಸೋಮವಾರಪೇಟೆಯಿಂದ ಮಡಿಕೇರಿ, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆಗೆ ಖಾಸಗಿ ಬಸ್‍ಗಳು ತೆರಳಿದವು.
ಪಟ್ಟಣ ಸುತ್ತಮುತ್ತಲ ಗ್ರಾಮೀಣ ಭಾಗದಿಂದ ಸಂತೆಗೆ ಆಗಮಿಸುವ ಸಾರ್ವಜನಿಕರು ಖಾಸಗಿ ಬಸ್‍ಗಳನ್ನೇ ಅವಲಂಬಿಸಬೇಕಾಯಿತು. ಸಂಜೆ ವೇಳೆಗೆ ಕೆಲಸ ಮುಗಿಸಿ ಗ್ರಾಮಗಳಿಗೆ ತೆರಳುವ ಸಂದರ್ಭ ಖಾಸಗಿ ಬಸ್‍ಗಳು ತುಂಬಿಹೋಗಿದ್ದವು.
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್‍ಗಳಿಲ್ಲದೇ ಬಿಕೋ ಎನ್ನುತ್ತಿದ್ದ ದೃಶ್ಯ ಗೋಚರಿಸಿದರೆ, ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿ ಕಂಡುಬಂತು.
ನೋವು ತೋಡಿಕೊಂಡ ಪ್ರಯಾಣಿಕರು
*ಗೋಣಿಕೊಪ್ಪಲು: ರಾಜ್ಯ ಸಾರಿಗೆ ನೌಕರರ ಮುಷ್ಕರ ಮೂರನೇ ದಿನವಾದ ಸೋಮವಾರವೂ ಮುಂದುವರಿದಿದ್ದರಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೇವಲ ಬೆರಳೆಣಿಕೆಯಷ್ಟು ಖಾಸಗಿ ಬಸ್‍ಗಳು ಕಂಡು ಬಂದವು. ಜಿಲ್ಲೆಯೊಳಗೆ ಓಡಾಡುವ ಪ್ರಯಾಣಿಕರು ಖಾಸಗಿ ಬಸ್‍ಗಳಲ್ಲಿ ಸಂಚರಿಸಿದರು. ಹೊರ ಜಿಲ್ಲೆಗೆ ತುರ್ತಾಗಿ ತೆರಳಬೇಕಾಗಿದ್ದವರು ಬಾಡಿಗೆ ವಾಹನಗಳತ್ತ ನೋಡುತ್ತಿದ್ದರು.
ಗೋಣಿಕೊಪ್ಪಲಿನಿಂದ ಪಂಚವಳ್ಳಿ, ಹುಣಸೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಕೆಲವು ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್‍ಗಳÀು ಸಂಚಾರದ ಸೌಲಭ್ಯ ಒದಗಿಸಿದವು.
ಈ ಬಗ್ಗೆ ತಮ್ಮ ನೋವು ತೋಡಿಕೊಂಡ ಚಾಮನಗರದ ಕೂಲಿ ಕಾರ್ಮಿಕ ಕುಮಾರ್ ಸಾರಿಗೆ ಬಸ್‍ಗಳ ಮುಷ್ಕರದಿಂದ ತುಂಬ ತೊಂದರೆಯಾಗಿದೆ. ಕುಟುಂಬ ಸಮೇತ ಚಾಮರಾಜ ನಗರಕ್ಕೆ ತುರ್ತಾಗಿ ಹೋಗಬೇಕಾಗಿದೆ ಎಂದರು. ಇದೇ ಪರಿಸ್ಥಿತಿ ಇತರ ಪ್ರಯಾಣಿಕರದ್ದೂ ಆಗಿತ್ತು.
ಸಂಚಾರ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಹೆಚ್ಚಿನ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಂಡು ಬರಲಿಲ್ಲ. ಆದರೆ ಖಾಸಗಿ ವಾಹನಗಳ ಓಡಾಟ ಹೆಚ್ಚಾಗಿತ್ತು. ಆಟೋ ಮತ್ತಿತರ ಬಾಡಿಗೆ ವಾಹನಗಳು ಬಿಡುವಿಲ್ಲದಂತೆ ಸಂಚರಿಸಿದವು.
ವಾರದ ಮೊದಲ ದಿನವಾದ ಸೋಮವಾರ ಸರ್ಕಾರಿ ಕಚೇರಿಗಳಿಗೆ ತೆರಳುವ ಹೊರ ಜಿಲ್ಲೆಯ ನೌಕರರು ಸಾರಿಗೆ ಬಸ್ ಕೊರತೆಯಿಂದ ಬವಣೆ ಅನುಭವಿಸಿದರು.