ಮಡಿಕೇರಿ, ಡಿ. 14: ಅಕ್ರಮ ಬಂದೂಕು ಹೊಂದಿದ್ದ ವ್ಯಕ್ತಿಯೋರ್ವನನ್ನು ಮಡಿಕೇರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಸುಂಟಿಕೊಪ್ಪ ಕಂಬಿಬಾಣೆಯ ಅತ್ತೂರು ನಲ್ಲೂರು ಗ್ರಾಮದ ನಿವಾಸಿ, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುಮಾಸ್ತನಾಗಿರುವ ಬಿ.ಎಂ. ಶಾಂತರಾಜು ಬಂಧಿತ ಆರೋಪಿ. ಈತ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಳಿ ಯಾವದೇ ದಾಖಲಾತಿಗಳಿಲ್ಲದ ಅಕ್ರಮ ಬಂದೂಕು ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಮತ್ತೊಂದು ಅಕ್ರಮ ಬಂದೂಕು ನಾಗಭೂಷನ್ ಎಂಬವರ ವಶದಲ್ಲಿದ್ದು, ಅವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಅದನ್ನು ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅದನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರಾ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕಿ ಅಂತಿಮ ಎಂ.ಟಿ. ಸಹಾಯಕ ಉಪ ನಿರೀಕ್ಷಕ ಹೊನ್ನಪ್ಪ ಕೆ.ಜಿ., ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗನ್ನವರ್, ಅರುಣ್‍ಕುಮಾರ್ ಬಿ.ಜಿ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.