ಚೆಟ್ಟಳ್ಳಿ, ಡಿ. 14: ಚೇರಳ ಗೌಡ ಸಂಘದ ವಾರ್ಷಿಕ ಮಹಾ ಸಭೆ ತಾ. 13 ರಂದು ಮರದಾಳು ಐನ್‍ಮನೆಯಲ್ಲಿ ಅಯ್ಯಂಡ್ರ ರಾಘವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರ್ಥನೆಯನ್ನು ಪೇರಿಯನ ರಕ್ಷಿತಾ ಮತ್ತು ಸಹೋದರಿಯರು ಮಾಡಿದರು. ವಾರ್ಷಿಕ ವರದಿಯನ್ನು ಆಜೀರ ಧನಂಜಯ ಮಂಡಿಸಿದರು. ಕೋಶಾಧಿಕಾರಿ ಮುಕ್ಕಾಟಿರ ಪಳಂಗಪ್ಪ ಸ್ವಾಗತ ಕೋರಿದರು.
ವಾರ್ಷಿಕ ಮಹಾಸಭೆಗೆ ಏಲಕ್ಕಿ ಮಾರಾಟ ಸಹಕಾರ ಸಂಘದಿಂದ ವಿಜೇತರಾದ ರೈತಮಿತ್ರ ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು ಹಾಜರಿದ್ದರು. ರೈತ ಮಿತ್ರ ಕೂಟದ ಪರವಾಗಿ ಅಯ್ಯಂಡ್ರ ರಾಘವಯ್ಯ ಮಾತನಾಡಿ, ನಮ್ಮಿಂದ ಆದಷ್ಟು ಕರಿಮೆಣಸನ್ನು ಏಲಕ್ಕಿ ಮಾರಾಟ ಸಂಘದಲ್ಲಿ ಇಡುವುದಾಗಿ ಸಭೆಯ ಪರವಾಗಿ ಒಪ್ಪಿಕೊಂಡರು. ಹಾಗೆಯೇ ಏಲಕ್ಕಿ ರೈತ ಮಿತ್ರ ಕೂಟದ ಅಧ್ಯಕ್ಷ ಸೂದನ ಈರಪ್ಪ ಮಾತನಾಡಿ, ಮುಂದಿನ 5 ವರ್ಷದಲ್ಲಿ ಯಾವುದೇ ಲೋಪದೋಷ ಬಾರದ ಹಾಗೆ ನೋಡಿಕೊಂಡು ಏಲಕ್ಕಿ ಮಾರಾಟ ಸಂಘವನ್ನು ಲಾಭದತ್ತ ಕೊಂಡೊಯ್ಯು ವುದಾಗಿ ಭರವಸೆ ನೀಡಿದರು.
ಚೇರಳ ಗೌಡ ಸಂಘದ ಪರವಾಗಿ ಏಲಕ್ಕಿ ರೈತಮಿತ್ರ ಕೂಟದಿಂದ ವಿಜೇತರಿಗೆ ಸನ್ಮಾನ ಮಾಡಲಾಯಿತು. ಅಧ್ಯಕ್ಷ ಸೂದನ ಈರಪ್ಪ, ಉಪಾಧ್ಯಕ್ಷ ಕೆ.ಕೆ. ಗೋಪಾಲ, ನಿರ್ದೇಶಕರು ಗಳಾದ ಪೇರಿಯನ ಉದಯ, ಕುಂಭಗೌಡನ ವಿನೋದ್ ಕುಮಾರ್, ಬಿ.ಸಿ. ಚೆನ್ನಪ್ಪ, ಸಿ.ಪಿ. ವಿಜಯ ಕುಮಾರ್, ಅಂಬೇಕಲ್ಲು ಸುಶೀಲ ಕುಶಾಲಪ್ಪ ಮತ್ತು ಪರಿವಾರನ ಕವಿತ ಭರತ್ ಅವರಿಗೆ ಸನ್ಮಾನ ಮಾಡಲಾಯಿತು.