ನಾಪೋಕ್ಲು, ಡಿ. 14: ಗ್ರಾಮ ಪಂಚಾಯಿತಿ ಚುನಾವಣೆಗೆ ಸಲ್ಲಿಸ ಲಾಗಿದ್ದ ನಾಮಪತ್ರವನ್ನು ಹಿಂತೆಗೆದು ಕೊಳ್ಳಲು ಸೋಮವಾರ ಅಂತಿಮ ದಿನವಾಗಿದ್ದು ಮೂಲ ಸೌಕರ್ಯ ದಿಂದ ವಂಚಿತರಾಗಿರುವ ಹಿನ್ನೆಲೆ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಯ್ಯಂಗೇರಿ ಹಾಗೂ ಕುಂಬಳದಾಳು ಗ್ರಾಮದ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ಗಳನ್ನು ಹಿಂಪಡೆದುಕೊಳ್ಳುವುದರ ಮೂಲಕ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಹೊದ್ದೂರು ಗ್ರಾಮಪಂಚಾಯಿತಿ ಗೆ ಈಗಾಗಲೇ 40 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮೂಲ ಸೌಕರ್ಯ ಸಿಗದ ಹಿನ್ನೆಲೆಯಲ್ಲಿ ಕುಂಬಳದಾಳು ಕುಯ್ಯಂಗೇರಿ ಕ್ಷೇತ್ರದ ಕಡ್ಲೆರ ಟೈನಿ, ಕರ್ಣಯ್ಯನ ಮಮತ, ಭಾಗ್ಯ, ಪುಷ್ಪಾ, ಪಾರ್ವತಿ ಈ ಐವರು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ. ಇದಲ್ಲದೆ ಕೊಟ್ಟಮುಡಿ ಕ್ಷೇತ್ರದ ಸಾರಮ ನಾಮಪತ್ರ ಹಿಂತೆಗೆದು ಕೊಂಡಿದ್ದು 34 ಮಂದಿ ಸ್ಪರ್ಧಾಕಣ ದಲ್ಲಿದ್ದಾರೆ.
ಕುಂಬಳದಾಳು - ಕುಯ್ಯಂಗೇರಿ ಗ್ರಾಮವು ರಸ್ತೆ ಸೌಕರ್ಯದಿಂದ ವಂಚಿತವಾಗಿದೆ ಎಂಬ ಹಿನ್ನೆಲೆಯಲ್ಲಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಮೂರ್ನಾಡು - ಕುಂಬಳದಾಳು - ಕೊಟ್ಟಮುಡಿ ರಸ್ತೆ ಸರಿಪಡಿಸದಿದ್ದಲ್ಲಿ ಕುಂಬಳದಾಳು ಕುಯ್ಯಂಗೇರಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದರು. ಇದೀಗ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಗ್ರಾಮಸ್ಥರ ಕೋರಿಕೆ ಮೇರೆಗೆ ನಾಮಪತ್ರ ಹಿಂತೆಗೆದು ಕೊಂಡು ಚುನಾವಣೆ ಯಿಂದ ದೂರ ಉಳಿದಿದ್ದಾರೆ.
ಈ ಸಂದರ್ಭ ಗ್ರಾಮಸ್ಥ ಕಡ್ಲೇರ ಗಣಪತಿ ಮಾತನಾಡಿ ಮೂರ್ನಾಡಿ ನಿಂದ ಕುಂಬಳದಾಳು ಮೂಲಕ ಕೊಟ್ಟಮುಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದ ಕಾರಣ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿ ದ್ದಾರೆ. ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಕಾಮಗಾರಿಯನ್ನು ಸ್ಥಗಿತ ಗೊಳಿಸಿದ್ದು ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವ ಬಗ್ಗೆ ಅಭ್ಯರ್ಥಿಗಳಿಗೆ ಮನವಿ ಸಲ್ಲಿಸಿದ ಮೇರೆಗೆ ಸ್ವಇಚ್ಚೆಯಿಂದ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ ಎಂದರು. ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಕಡ್ಲೆರ ಟೈನಿ ಮಾತನಾಡಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿರುವ ಹಿನ್ನೆಲೆಯಲ್ಲಿ ನಾಮಪತ್ರ ವಾಪಾಸು ಪಡೆದಿರುವುದಾಗಿ ಹೇಳಿದರು. ಈ ಸಂದರ್ಭ ಗ್ರಾಮಸ್ಥರಾದ ತೆಕ್ಕಡೆ ಸುನಂದ, ದಂಬೆಕೋಡಿ ರಾಜೇಶ್, ದೇವಜನ ವಿಖ್ಯಾತ, ದೇವಜನ ಸುದೀಪ್ ಕುಮಾರ್, ನೆರವಂಡ ಜಯ, ತೆಕ್ಕಡ ಪೂರ್ಣೇಶ್, ತೆಕ್ಕಡ ಸುಗುಣ, ದೇವಜನ ಶಿವಪ್ರಕಾಶ್ ಮತ್ತಿತರರು ಇದ್ದರು. - ದುಗ್ಗಳ