ಪಾಲಿಬೆಟ್ಟ, ಡಿ. 14 : ನಿರಂತರ ಕಾಡು ಪ್ರಾಣಿಗಳ ಹಾವಳಿಯಿಂದ ಆದಿವಾಸಿ ಕುಟುಂಬಗಳು ಆತಂಕಕ್ಕೊಳಗಾಗಿದ್ದು, 2 ತಿಂಗಳಲ್ಲಿ 8 ಮನೆಗಳ ಮೇಲೆ ಕಾಡಾನೆ ದಾಳಿ ಮಾಡಿದ್ದು, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ಮೂಲ ಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿವೆ.

5 ವರ್ಷಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ಮೂಲಕ ನಿರ್ಮಿಸಲಾಗಿರುವ ಮನೆಗಳು ಅತ್ಯಂತ ಕಳಪೆಯಿಂದ ಕೂಡಿದ್ದು, ಬಾಗಿಲುಗಳು ಇಲ್ಲದೇ ಬೀಳುವ ಹಂತದಲ್ಲಿದ್ದರೆ. ಇತ್ತ ಕಾಡಾನೆಗಳು 8 ಮನೆಗಳ ಮೇಲೆ ದಾಳಿ ಮಾಡಿದ ಪರಿಣಾಮ 5 ಮನೆಗಳು ಸಂಪೂರ್ಣ ಜಖಂಗೊಂಡಿವೆ.

ಕಳೆದ ರಾತ್ರಿ ಗಣೇಶ್ ಎಂಬವರ ಮನೆಯ ಮೇಲೂ ದಾಳಿ ಮಾಡಿರುವ ಕಾಡಾನೆ ಮನೆಯಲ್ಲಿದ್ದ ಆಹಾರ ವಸ್ತುಗಳನ್ನು ತಿಂದು ತೆರಳಿದೆ. ಕೆಲಸ ನಿರ್ವಹಿಸಿ ಮನೆಗೆ ಹಿಂತಿರುಗುತ್ತಿದ್ದ ಹಾಡಿಯ ನಿವಾಸಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿ ಗಾಯಗೊಳಿಸಿದೆ.

ಹಾಡಿಯ ನಿವಾಸಿಗಳಾದ ಬೋಜ, ಸುಜಿ, ಹರಿ, ಸೋಮುಣು, ತಮ್ಮಣ್ಣ, ಶಿವಾಜಿ, ಸುರೇಶ್ ಅವರ ಮನೆ ಮೇಲೆ ಇತ್ತೀಚೆಗೆ ದಾಳಿ ಮಾಡಿರುವ ಕಾಡಾನೆಗಳು ಮನೆಗಳಿಗೆ ಹಾನಿ ಮಾಡಿವೆ. ಮನೆಯಲ್ಲಿದ್ದ ವಸ್ತುಗಳನ್ನು ತುಳಿದು ನಾಶ ಮಾಡಿವೆ.

ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಆದಿವಾಸಿ ಕುಟುಂಬಗಳು ಮತ್ತೇ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ಇತ್ತೀಚೆಗೆ ಮನೆಗಳ ಮೇಲೆ ದಾಳಿ ಮಾಡಿದ ಸಂದರ್ಭ ನಿದ್ರೆಯಲ್ಲಿದ್ದ ಮನೆಯವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆಯೂ ನಡೆದಿದೆ.

ಅಧಿಕಾರಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ನಿರಂತರ ಕಾಡಾನೆ ಹಾವಳಿಯಿಂದ ಮನೆಗಳಿಗೆ ಹಾನಿಯಾಗಿವೆ ಮನೆಯಲ್ಲಿದ್ದ ವಸ್ತುಗಳು ನಾಶವಾಗಿ ಆತಂಕದ ಜೀವನ ನಡೆಸುತ್ತಿರುವ ಹಾಡಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡದೆ ಕಡೆಗಣಿಸಿದ್ದಾರೆ ಎಂದು ಹಾಡಿಯ ನಿವಾಸಿ ಗಣೇಶ್ ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆದಿವಾಸಿ ಮುಖಂಡ ಜೆ.ಕೆ. ಅಪ್ಪಾಜಿ ಮಾತನಾಡಿ, ಆದಿವಾಸಿಗಳ ತಾಳ್ಮೆಯನ್ನು ಪರೀಕ್ಷಿಸದೆ ಕೂಡಲೆ ಹಾನಿಗೊಳಗಾಗಿರುವ ಮನೆಗಳನ್ನು ದುರಸ್ತಿಪಡಿಸಿ ಪರಿಹಾರ ನೀಡುವ ಮೂಲಕ ಸೋಲಾರ್ ಬೇಲಿಯನ್ನು ಅಳವಡಿಸಿ ಕಾಡಾನೆ ಹಾವಳಿ ತಡೆಗಟ್ಟದಿದ್ದಲ್ಲಿ ಆದಿವಾಸಿಗಳನ್ನು ಒಗ್ಗೂಡಿಸಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಹಾಡಿಯ ನಿವಾಸಿಗಳು ಇದ್ದರು.

- ಪುತ್ತಂ ಪ್ರದೀಪ್