ಮಡಿಕೇರಿ, ಡಿ. 15: ರಾಜ್ಯದ ಪ್ರಾದೇಶಿಕ ಕೇಂದ್ರಗಳಿಂದ ಬಿತ್ತರವಾಗುತ್ತಿದ್ದ ಕಾರ್ಯಕ್ರಮಗಳನ್ನು ಕೇಂದ್ರೀಕೃತಗೊಳಿಸಲು ಮುಂದಾಗಿರುವ ಆಕಾಶವಾಣಿ ಈ ಮೂಲಕ ಮಹತ್ವದ ಮರುಬ್ರ್ಯಾಂಡಿಂಗ್ ಸೇವೆ ಜಾರಿಗೊಳಿಸಲಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದರಿಂದಾಗಿ ಮಡಿಕೇರಿ ಆಕಾಶವಾಣಿ ಕೇಂದ್ರದಿಂದ ಬಹುತೇಕ ಕಾರ್ಯಕ್ರಮಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದಾಗಿ ಶಂಕಿಸಲಾಗಿದೆ.ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿಯು ದೇಶದ ವಿವಿಧೆಡೆಯ ಬಾನುಲಿ ಕೇಂದ್ರಗಳನ್ನು ಒಟ್ಟುಗೂಡಿಸಿ ಜನವರಿ 26 ರ ಗಣರಾಜ್ಯೋತ್ಸವದಂದು ‘ಏಕ್ ಭಾರತ್ - ಏಕ್ ರೇಡಿಯೊ’ ಎಂಬ ಮಹತ್ವದ ಮಾಧ್ಯಮ ಯೋಜನೆಗೆ ಮುಂದಾಗಿದೆ. ಈ ಮರುಬ್ರ್ಯಾಂಡಿಂಗ್‍ನಿಂದಾಗಿ ಆಯಾ ರಾಜ್ಯಗಳ ರಾಜಧಾನಿಯಲ್ಲಿರುವ ಆಕಾಶವಾಣಿಯ ಮುಖ್ಯ ಕೇಂದ್ರಗಳೇ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಲಿವೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಪ್ರಕಟಣೆ ಬರಬೇಕಾಗಿದೆಯಾದರೂ ಎಲ್ಲಾ ಆಕಾಶವಾಣಿ ಕೇಂದ್ರಗಳಿಗೆ ಅನಧಿಕೃತವಾಗಿ ಇಂಥದ್ದೊಂದು ಸಂದೇಶ ದೊರಕಿದೆ. ಆಕಾಶವಾಣಿಯ ನಿಗದಿತ ಕಾರ್ಯಕ್ರಮಗಳಿಗೆ ಜನವರಿ 26 ರಿಂದ ಒಂದೇ ವೇಳಾ ಪಟ್ಟಿ ಇರುತ್ತದೆ.

ಇದರಿಂದ ಏನಾಗಲಿದೆ?

ಬೆಂಗಳೂರು ಆಕಾಶವಾಣಿ ಕೇಂದ್ರದ ಈ ಏಕಸ್ವಾಮ್ಯದಿಂದಾಗಿ ಮಡಿಕೇರಿ, ಹಾಸನ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಎಫ್.ಎಂ.ಕೇಂದ್ರ ಸೇರಿದಂತೆ ಕರ್ನಾಟಕದ 9 ಬಾನುಲಿ ಕೇಂದ್ರಗಳ ಕಾರ್ಯಕ್ರಮಗಳು ಬೆಂಗಳೂರು ಕೇಂದ್ರದ ಮೂಲಕವೇ ಪ್ರಸಾರವಾಗಲಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬೆಂಗಳೂರು ಕೇಂದ್ರವೇ ಕಾರ್ಯಕ್ರಮಗಳ ಸ್ವರೂಪ ನಿರ್ಧರಿಸಲಿದ್ದು, ಯಾವ ಹೊತ್ತಿನಲ್ಲಿ ಯಾವ ಕಾರ್ಯಕ್ರಮ ಪ್ರಸಾರ ಮಾಡಬೇಕೆಂಬ ತೀರ್ಮಾನ ಕೈಗೊಳ್ಳಲಿದೆ.

ಇದು ಜಾರಿಗೆ ಬಂದದ್ದೇ ಆದಲ್ಲಿ ಕೊಡಗು ಜಿಲ್ಲೆಯ ಜನತೆಗೆ ಬಹಳ ದೊಡ್ಡ ನಷ್ಟವಾಗಲಿದೆ. ಕೊಡಗು ಎಫ್ ಎಂ ನಲ್ಲಿ ಪ್ರಸಾರವಾಗುತ್ತಿದ್ದ ಕೊಡವ, ಅರೆಭಾಷೆ, ಬ್ಯಾರಿ, ತುಳು ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಬಹಳಷ್ಟು ಮಂದಿಗೆ ವರದಾನವಾಗಿದ್ದವು. ಆಕಾಶವಾಣಿಯಲ್ಲಿ ಪ್ರಸಾರವಾಗುವ ನಿಧನ ಸುದ್ದಿ ಬಹುತೇಕರಿಗೆ ಪರಿಚಯಸ್ಥರ ನಿಧನದ ಮಾಹಿತಿಯನ್ನು ಕೂಡಲೇ ಒದಗಿಸುತ್ತಿತ್ತು.

ಪ್ರಾದೇಶಿಕ ಭಾಷೆಗಳಾದ ಕೊಡವ, ಅರೆಭಾಷೆ ಕಾರ್ಯಕ್ರಮಗಳಿಂದಾಗಿ ಜಿಲ್ಲೆಯ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದವು. ಕಲಾವಿದರು, ಕಲಾಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು, ಕವಿಗಳು, ಸಾಹಿತಿಗಳು,

ಲೇಖಕರು, ಧಾರ್ಮಿಕ, ಆದ್ಯಾತ್ಮಿಕ ಜ್ಞಾನಿಗಳು, ಗಾಯಕರು ಹೀಗೆ ಮಡಿಕೇರಿ ಆಕಾಶವಾಣಿ 27 ವರ್ಷಗಳಿಂದ ಸಾವಿರಾರು ಪ್ರತಿಭೆಗಳಿಗೆ ಅವಕಾಶ ನೀಡಿತ್ತು.

(ಮೊದಲ ಪುಟದಿಂದ) ಇನ್ನು ಮುಂದೆ ಬೆಂಗಳೂರು ಕೇಂದ್ರದಿಂದಲೇ ಕಾರ್ಯಕ್ರಮ ಪ್ರಸಾರವಾದಲ್ಲಿ, ಕೊಡವ, ಅರೆಭಾಷಾ ಕಾರ್ಯಕ್ರಮಗಳಿಗೆ ರಾಜ್ಯವ್ಯಾಪಿಯ ಏಕ ಪ್ರಸಾರದಲ್ಲಿ ಮಾನ್ಯತೆ ಸಿಗುವುದು ಖಂಡಿತಾ ಕಷ್ಟಸಾಧ್ಯ. ಮಡಿಕೇರಿಯಲ್ಲಿಯೇ ನಿಲಯ ಹೊಂದಿ ಇಲ್ಲಿಯ ಸುಸಜ್ಜಿತ ಸ್ಟುಡಿಯೋದಲ್ಲಿ ಕಾರ್ಯಕ್ರಮ ನೀಡುತ್ತಿದ್ದವರು ದೂರದ ಬೆಂಗಳೂರಿಗೆ ತೆರಳಿ ಕಾರ್ಯಕ್ರಮ ನೀಡುವುದು ಖಂಡಿತಾ ಸುಲಭವಲ್ಲ. .

ಮಡಿಕೇರಿ ಆಕಾಶವಾಣಿಯನ್ನೇ ಅವಲಂಬಿಸಿಕೊಂಡು ಅನೇಕ ಉದ್ಘೋಷಕರು, ವಾರ್ತಾ ವಾಚಕರು, ನಿರೂಪಕರು ಇದ್ದಾರೆ. ಇಂಥವರ ಉದ್ಯೋಗಕ್ಕೂ ಕುತ್ತು ಬರುವ ಸಾಧ್ಯತೆಯಿದೆ. ಕಾರ್ಯಕ್ರಮಗಳನ್ನು ನೀಡಿದರೆ ಕಲಾವಿದರಿಗೆ ದೊರಕುತ್ತಿದ್ದ ಸಂಭಾವನೆಯೂ ದೊರಕದೆ ಇರುವ ಸ್ಥಿತಿ ತಲೆದೋರಲಿದೆ. ಬೆಂಗಳೂರು ಕೇಂದ್ರದ ಪ್ರಸಾರದಲ್ಲಿ ಕೊಡಗಿನ ನಿಧನ ಸುದ್ದಿಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ?

ಎಲ್ಲಕ್ಕಿಂತ ಮುಖ್ಯವಾಗಿ ಕೊಡವ, ಅರೆಭಾಷೆಯಂತ ಪ್ರಮುಖ ಪ್ರಾದೇಶಿಕ ಭಾಷೆಗಳಿಗೆ ಆಕಾಶವಾಣಿ ಮಾಧ್ಯಮದ ಮೂಲಕ ದೊರಕಿದ್ದ ಮನ್ನಣೆಗೇ ಧಕ್ಕೆಯಾಗಲಿದೆ. ಇದರಿಂದಾಗಿ ಪ್ರಾದೇಶಿಕ ಭಾಷಿಕರ ಸಂಸ್ಕøತಿ, ಸಂಪ್ರದಾಯಗಳ ಪಸರಿಸುವಿಕೆಗೂ ತೊಡಕಾಗಲಿದೆ. ಆಕಾಶವಾಣಿ ಕೇವಲ ಮಾಧ್ಯಮ ಮಾತ್ರವಾಗಿರದೆ ಕೊಡಗಿನ ಜನರ ಪಾಲಿಗೆ ಸಾಂಸ್ಕøತಿಕ ಮಾಧ್ಯಮವಾಗಿಯೂ ಗುರುತಿಸಲ್ಪಟ್ಟ ಹೆಗ್ಗಳಿಕೆ ಹೊಂದಿದೆ.

ಯಾಕಾಗಿ ಈ ಉದ್ದೇಶ?

ಕಳೆದ 3-4 ವರ್ಷಗಳಿಂದ ದೇಶವ್ಯಾಪಿ ಬಾನುಲಿ ಕೇಂದ್ರಗಳಲ್ಲಿ ಸಾವಿರಾರು ಮಂದಿ ಉದ್ಯೋಗಿಗಳು ನಿವೃತ್ತಿಯಾಗುತ್ತಲೇ ಇದ್ದಾರೆ. ಇವರ ಬದಲಿಗೆ ಹೊಸ ಉದ್ಯೋಗಿಗಳ ನೇಮಕಾತಿ ನಿರೀಕ್ಷಿತ ರೀತಿಯಲ್ಲಿ ಆಗಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಗಳು ಬಹಳಷ್ಟು ರೇಡಿಯೊ ಕೇಂದ್ರಗಳಲ್ಲಿದ್ದಾರೆ. ಇವರನ್ನೇ ಬಳಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿತ್ತು. ಪ್ರಸಾರ ಭಾರತಿಗೆ ಆದಾಯವೂ ತೀವ್ರ ಇಳಿಮುಖವಾಗಿತ್ತು. ಹೀಗಾಗಿ ವೇತನ ನೀಡಿಕೆಯಲ್ಲಿಯೂ ವಿಳಂಭವಾಗುತ್ತಿತ್ತು. ಮಡಿಕೇರಿಯಂತಹ ಕೆಲವೊಂದು ಕೇಂದ್ರ ಹೊರತು ಪಡಿಸಿದರೆ ದೇಶದ ಅನೇಕ ಎಫ್.ಎಂ. ಕೇಂದ್ರಗಳು ಜಾಹೀರಾತು ಆದಾಯ ಮೂಲವಿಲ್ಲದೇ ನಷ್ಟದಲ್ಲಿದ್ದು ನಿರ್ವಹಣೆಗೆ ಬಿಳಿ ಆನೆಗಳಂತಾಗಿದ್ದವು. ಇಂತಹ ನಷ್ಟದ ಬದಲಿಗೆ ವೆಚ್ಚ ಮಿತಿಗೆ ಕಡಿವಾಣ ಹಾಕುವ ಉದ್ದೇಶದಿಂದ ‘ಏಕ್ ಭಾರತ್-ಏಕ್ ರೇಡಿಯೊ’ ಯೋಜನೆಯನ್ನು ಸದ್ದಿಲ್ಲದೆ ಜಾರಿಗೆ ತರಲು ಪ್ರಸಾರ ಭಾರತಿ ಮುಂದಾಗಿದೆ.

ಮೂಲಗಳ ಪ್ರಕಾರ ಈಗಾಗಲೇ ಖಾಸಗಿ ಸಂಸ್ಥೆಯೊಂದು ಮಡಿಕೇರಿ ಅಥವಾ ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ಖಾಸಗಿ ಎಫ್.ಎಂ. ನಿಲಯಕ್ಕೆ ಸರ್ವೇ ನಡೆಸಿದೆ. ಸರ್ಕಾರಿ ಎಫ್.ಎಂ. ಕೇಂದ್ರದ ಜನಪ್ರಿಯತೆ ಆಧಾರದಲ್ಲಿ ಖಾಸಗಿ ಎಫ್.ಎಂ.ಗೆ ಕೊಡಗಿನಲ್ಲಿ ಶ್ರೋತೃಗಳ ಮಾನ್ಯತೆ ದೊರಕಬಹುದು ಎಂಬ ಅಭಿಪ್ರಾಯವೂ ಸಮೀಕ್ಷೆಯಲ್ಲಿ ಎರಡು ವರ್ಷಗಳ ಹಿಂದೆಯೇ ದೊರಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಖಾಸಗಿ ಎಫ್.ಎಂ. ಕೊಡಗಿನ ಮನೆಗಳ ರೇಡಿಯೊಗಳಲ್ಲಿ ಕೇಳಿಬರುವ ಸಾಧ್ಯತೆಯೂ ಹೆಚ್ಚಿದೆ. ಆದರೆ ಖಾಸಗಿ ಎಫ್.ಎಂ.ಗಳಲ್ಲಿ ಇಂದಿನ ಯುವಪೀಳಿಗೆಯನ್ನೇ ದೃಷ್ಟಿಯಲ್ಲಿರಿಸಿ ಕೊಂಡು ಚಲನಚಿತ್ರ ಗೀತೆಗಳಿಗೆ ಆದ್ಯತೆ ನೀಡಲಾಗುತ್ತದೆಯೇ ವಿನಾ ಕೃಷಿ, ಸಂಸ್ಕøತಿ, ನಾಡು, ನುಡಿಗೆ ಮಾನ್ಯತೆ ದೊರಕುತ್ತದೆ ಎಂಬ ನಿರೀಕ್ಷೆ ತಪ್ಪಾದೀತು.

ಮಡಿಕೇರಿ ಎಫ್ ಎಂ. ಕೇಂದ್ರವು ಬೆಂಗಳೂರಿನೊಂದಿಗೆ ಮರುಬ್ರ್ಯಾಂಡಿಂಗ್ ಆಗುವುದನ್ನು ತಪ್ಪಿಸಬಹುದೇ?

ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟ. ಯಾಕೆಂದರೆ, ಇಂಥ ನಿರ್ಧಾರ ದೇಶವ್ಯಾಪಿ ಜಾರಿಗೆ ತರಲಾಗುತ್ತಿದೆ. ಹೀಗಾಗಿ ಕೊಡಗಿಗೆ ಸಂಬಂಧಿಸಿದ ಜನಪ್ರತಿನಿಧಿಗಳ ಮಾತು, ಕೊಡಗಿನ ಜನರ ಕೂಗನ್ನು ಕೇಂದ್ರ ಸರ್ಕಾರ ಕೇಳಿಸಿಕೊಳ್ಳುತ್ತದೆ ಎಂಬುದು ಭ್ರಮೆಯಾದೀತು. ಇದೇ 18 ರಂದು ಶುಕ್ರವಾರ ಮರುಬ್ರ್ಯಾಂಡಿಂಗ್ ಸಂಬಂಧಿತ ಬೆಂಗಳೂರಿನಲ್ಲಿ ಉದ್ಯೋಗಿಗಳ ಸಭೆ ಆಯೋಜಿತವಾಗಿದೆ. ಅಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆಯೋ ಕಾದು ನೋಡಬೇಕು. ಮೂಲಗಳ ಪ್ರಕಾರ ಜನವರಿ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ಮರುಬ್ರ್ಯಾಂಡಿಂಗ್ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ.

ಇದು ಅನಿವಾರ್ಯ - ಪ್ರಕಾಶ್ ವೀರ್

ಆಕಾಶವಾಣಿ ವಿಭಿನ್ನ ಮಾಧ್ಯಮವಾಗಿ ಗುರುತಿಸಿಕೊಳ್ಳಬೇಕಾಗಿರುವುದು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಅನಿವಾರ್ಯ. ವಾಣಿಜ್ಯ ದೃಷ್ಟಿಕೋನ ಕೂಡ ಗಮನಿಸಲೇಬೇಕಾದ ಅಂಶವಾಗಿದೆ. ಹೆಚ್ಚಿನ ಕಾರ್ಯಕ್ರಮಗಳಿಗಿಂತ ಗುಣಮಟ್ಟದ ಕಾರ್ಯಕ್ರಮಕ್ಕೆ ನಾವು ಗಮನ ಹರಿಸಲಿದ್ದೇವೆ. ವಿವಿಧ ಆಕಾಶವಾಣಿ ಕೇಂದ್ರಗಳಿಂದ ಒಂದೇ ರೀತಿಯ ಕಾರ್ಯಕ್ರಮಗಳನ್ನು ಶ್ರಮವಹಿಸಿ ರೂಪಿಸುವ ಬದಲಿಗೆ, ಒಂದೇ ಕಡೆ ಕೇಂದ್ರೀಕರಿಸಿ ಕಾರ್ಯಕ್ರಮ ರೂಪಿಸಿದರೆ ಆರ್ಥಿಕ ಲಾಭ ಸಾಧ್ಯ. ಡಿಜಿಟಲ್ ಮಾಧ್ಯಮ ಯುಗಕ್ಕೆ ತಕ್ಕಂತೆ ಆಕಾಶವಾಣಿ ಕೂಡ ಬದಲಾಗಲೇಬೇಕಾದ ಅಗತ್ಯ ಇಂದಿನ ದಿನಗಳಲ್ಲಿದೆ. ಇದರಿಂದಾಗಿ ಪ್ರಾದೇಶಿಕ ಭಾಷಾ ಕಾರ್ಯಕ್ರಮಗಳಿಗೆ ಸಮಸ್ಯೆಯಾಗುತ್ತದೆ ಎಂಬುದು ಪೂರ್ತಿ ನಿಜವಲ್ಲ. ಯಾಕೆಂದರೆ, ಪ್ರಾದೇಶಿಕ ಭಾಷೆಯ ಕಾರ್ಯಕ್ರಮಗಳು ಬೆಂಗಳೂರಿನಿಂದ ಪ್ರಸಾರವಾದರೆ ಆ ಪ್ರಾದೇಶಿಕ ಭಾಷೆಯು ರಾಜ್ಯವ್ಯಾಪಿ ಇರುವ ಜನರನ್ನು ತಲುಪುವುದು ಸುಲಭಸಾಧ್ಯವಾಗಲಿದೆ. ಗುಣಮಟ್ಟದ ಕಾರ್ಯಕ್ರಮಗಳು ಬೆಂಗಳೂರಿನಿಂದಲೇ ಪ್ರಸಾರವಾಗುವಂತೆ ಗಮನ ಹರಿಸಲಾಗುತ್ತದೆ ಎನ್ನುತ್ತಾರೆ ಪ್ರಸಾರ ಭಾರತಿಯ ಉಪಮಹಾನಿರ್ದೇಶಕ ಪ್ರಕಾಶ್ ವೀರ್.