ಕಣಿವೆ, ಡಿ. 16: ಅಯ್ಯೋ ಏನಿದು ಕಾಡು ಗಿಡ ಬೆಳೆದು ನಿಂತ ಪೆÇದೆ ಎನ್ನಬೇಡಿ. ವಯೋವೃದ್ಧ ವ್ಯಕ್ತಿಯೊಬ್ಬರಿಗೆ ಆಶ್ರಯ ನೀಡಿರುವ ಸೂರು ಇದು.

ಈ ಸೂರಿನ ಮೇಲೆ ಆ ವ್ಯಕ್ತಿ ಕಳೆದ ಹಲವು ವರ್ಷಗಳಿಂದಲೂ ಬೆಳೆಸುತ್ತಿರುವ ತರಕಾರಿ ಕಾಯಿ ಪಲ್ಯೆಗಳಲ್ಲಿ ಒಂದಾದ ಚಪ್ಪರದಾವರೆಯ ಬಳ್ಳಿಯಿದು.

ದಾರಿ ಹೋಕರಿಗೆ ಇದು ಬೇಲಿಯಂತೆ ಕಂಡರೂ ಕೂಡ ಇದರ ಮೇಲಿನ ಚಪ್ಪರದಾವರೆ ಕಾಯಿ ಉತ್ತಮ ತಿನಿಸು. ಆರೋಗ್ಯದಾಯಕವಾದುದು. ಇದೀಗ ಹೇಳಿ ಕೇಳಿ ಬಿಸಿಲು ಝಳಪಿಸುವ ಬೇಸಿಗೆ ಆರಂಭವಾಗುವ ಕಾಲ.

ಮಾಗಿಯ ಚಳಿಗಾಲ ಮುಗಿಯುತ್ತಿದ್ದು ಸುಡುವ ಬೇಸಿಗೆ ಆರಂಭವಾಗುವ ಕಾಲವಿದು.

ಗೊಂದಿ ಬಸವನಹಳ್ಳಿಯ ನಿವಾಸಿ ವಯೋವೃದ್ದ ಅಯ್ಯಪ್ಪ ಎಂಬವರು ತಾವು ವಾಸಿಸುವ ಸಣ್ಣ ಗುಡಿಸಲಿನ ಮೇಲೆ ಬಿಸಿಲ ಝಳ ಬಾಧಿಸದಿರಲೆಂದು ಗುಡಿಸಲ ಮುಂಬದಿ ಒಂದು ಚಪ್ಪರದಾವರೆಯ ಬೀಜವನ್ನು ನೆಟ್ಟು ಅದರ ಬಳ್ಳಿ ಗುಡಿಸಲ ಮೇಲೆ ಹಬ್ಬುವಂತೆ ಮಾಡಿಕೊಂಡಿದ್ದಾರೆ. ಈಗ ಆ ಬಳ್ಳಿ ಗುಡಿಸಲ ಮೇಲೆ ಸೊಂಪಾಗಿ ಹರಡಿಸಿಕೊಂಡಿರುವ ಹಸಿರ ಎಲೆಗಳು ಗುಡಿಸಲ ಒಳಭಾಗವನ್ನು ತಂಪಾಗಿಸಿದೆ.

ಅಂದರೆ ಇಲ್ಲಿ ಸೂರಿನ ಮೇಲೆ ಕಾಯುವ ಬಿಸಿಲಿಗೆ ಈ ಬಳ್ಳಿ ಒಂದು ಕಡೆ ತಂಪಾದ ವಾತಾವರಣವನ್ನು ಉಂಟು ಮಾಡಿದರೆ, ಇನ್ನೊಂದೆಡೆ ಈ ಬಳ್ಳಿಯನ್ನು ನೆಟ್ಟು ಬೆಳೆಸಿದಾತನಿಗೆ ಚಪ್ಪರದಾವರೆಯ ಕಾಯಿಯನ್ನು ಯಥೇಚ್ಛವಾಗಿ ಬಿಡುತ್ತಿರುವುದರಿಂದ ಈ ಚಪ್ಪರದಾವರೆಯನ್ನು ಬಿಡಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಈ ವಯೋವೃದ್ದ ಅಯ್ಯಪ್ಪ ಅವರಿಗೆ ಒಂದಿಷ್ಟು ಆದಾಯವೂ ಬರುತ್ತಿದೆ.

ಪ್ರತೀ ವರ್ಷವೂ ಇಂತಹ ಚಪ್ಪರದಾವರೆಯನ್ನು ನಾನು ಬೆಳೆಸುತ್ತೇನೆ. ಇದು ಒಂದು ವರ್ಷ ಅವಧಿ ಸೂರಿನ ಮೇಲೆ ವಿಶಾಲವಾಗಿ ಹರಡಿ ಬೆಳೆದು ನನಗೆ ತಂಪು ನೀಡುತ್ತದೆ. ಆಮೇಲೆ ಕಾಯಿ ಬಿಡುವುದು ಸ್ಥಗಿತಗೊಂಡು ಬಳ್ಳಿ ಒಣಗಿದಾಗ ಅದನ್ನು ತೆರವು ಗೊಳಿಸಿ ಮತ್ತೆ ಬೇರೆ ಬಳ್ಳಿಯನ್ನು ಬೆಳೆಸುತ್ತೇನೆ ಎನ್ನುತ್ತಾರೆ ಅಯ್ಯಪ್ಪ.

ಗ್ರಾಮೀಣ ಪ್ರದೇಶದ ವಾಸಿಗಳು ಹೆಚ್ಚಾಗಿ ಈ ಹಬ್ಬುವ ತರಕಾರಿ ಗಿಡವನ್ನು ಮನೆಯ ಮೇಲೆ ಮತ್ತು ಮನೆಯ ಬಳಿಯ ಬೇಲಿಯ ಮೇಲೆ ಹಬ್ಬಿಸಿ ಬೆಳೆಸುತ್ತಾರೆ.

- ಕೆ.ಎಸ್. ಮೂರ್ತಿ